ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ಕಾಮಗಾರಿ ಸರಿಪಡಿಸಲು ಸೂಚನೆ: ಸಂಸದ

Last Updated 3 ಜುಲೈ 2020, 15:27 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ನಾರಾಯಣಪುರ ಬಲದಂಡೆ ಕಾಲುವೆ ನಿರ್ಮಾಣದಲ್ಲಿ ಲೋಪದೋಷ ಸರಿಪಡಿಸಿ ನಿಯಮಾವಳಿಗಳ ಕಾಮಗಾರಿ ಮಾಡಲು ಸೂಚನೆ ನೀಡಲಾಗಿದೆ. ಈ ಕುರಿತು ಸಚಿವರ, ಅಧಿಕಾರಿಗಳ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ಪಿ.ಎಂ.ಕೇರ್ ನಿಧಿಗೆ ನೀಡಿದ ಚೆಕ್ ಸ್ವೀಕರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಮಗಾರಿ ಪ್ರಗತಿಯಲ್ಲಿರುವ ಮಧ್ಯೆ ಡ್ಯಾಂ ಮೂಲಕ ನೀರು ಬಿಡುವಾಗ ತಾತ್ಕಾಲಿಕ ಸ್ಥಗಿತಗೊಳಿಸಲಾಗುವುದು. ಕಾಲುವೆ ಆಧುನೀಕರಣ ಕಾಮಗಾರಿಯ ಬಗ್ಗೆ ರೈತ ಸಂಘಟನೆಯಿಂದ ಸಚಿವರಿಗೂ ದೂರು ನೀಡಿದ್ದು ಪರಿಶೀಲಿಸಲಾಗಿದೆ. ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. ಅಲ್ಲದೇ ಕಳಪೆ ಕಾಮಗಾರಿ ಬಗ್ಗೆ ಮತ್ತಷ್ಟು ದೂರು ಬಂದರೆ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗೋಲಪಲ್ಲಿ, ತಿಂಥಣಿ ಸೇರಿ ಮೂರು ಕಡೆ 36 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದ್ದು, ಅಲ್ಲಲ್ಲಿ ಬ್ಯಾರೇಜ್ ನಿರ್ಮಾಣಕ್ಕೆ ವರದಿ ನೀಡುವಂತೆ ಅಧಿಕಾರಿಗಳಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದ್ದಾರೆ. 1991-92ರಲ್ಲಿ ನಿರ್ಮಾಣಗೊಂಡಿರುವ ರಾಂಪೂರ ಏತನೀರಾವರಿಯ ವಿಸ್ತೀರ್ಣ ಮಾಡುವ ಸಾಧ್ಯತೆಗಾಗಿ ಚಿಂತನೆ ನಡೆದಿದೆ ಎಂದು ಹೇಳಿದರು.

ದೇಶದಲ್ಲಿ ಕೋವಿಡ್–19 ಹಾಗೂ ಗಡಿಯಲ್ಲಿ ನೆರೆ ರಾಷ್ಟ್ರಗಳಿಂದ ತತ್ತರಿಸಿದ್ದು, ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ದಾನಿಗಳು, ಸಂಘ ಸಂಸ್ಥೆಗಳು ಸಹಾಯ ಹಸ್ತ ನೀಡಿದ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯದದ ನೌಕರರ, ಸಿಬ್ಬಂದಿ ಒಂದು ದಿನದ ವೇತನ ₹ 18, 29,411 ಸಂಗ್ರಹಿಸಿ ಪಿ.ಎಂ. ಕೇರ್ ಗೆ ನೀಡಿದ್ದು ಶ್ಲಾಘನೀಯ. ಇದನ್ನು ಕೇಂದ್ರ ಪ್ರಧಾನಮಂತ್ರಿ ಕೋವಿಡ್ ಪರಿಹಾರ ನಿಧಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಮಾತನಾಡಿ, ರಾಯಚೂರು ಕೃಷಿ ವಿವಿಯಿಂದ ಲಾಕ್‌ಡೌನ್ ಸಂದರ್ಭದಲ್ಲಿ ರೈತರಿಗೆ ಅಗ್ರಿವಾರ್, ಬೆಳೆ ಸಮೀಕ್ಷೆ ಸೇರಿ ಇತರೆ ವಿಧಾನದ ಮೂಲಕ ಬಹಳಷ್ಟು ನೆರವು ನೀಡಲಾಗಿದೆ. ತಾಂತ್ರಿಕ ಸಹಾಯ ಸೇರಿದಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಸುಮಾರು ₹7ಕೋಟಿಗೂ ಅಧಿಕ ವ್ಯವಹಾರವಾಗಿದೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ತ್ರಿವಿಕ್ರಮ್ ಜೋಶಿ, ಕೋಟ್ರೇಶಪ್ಪ ಕೋರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT