ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ನೈಸರ್ಗಿಕ ಚೆಲುವನ್ನು ಬಿಂಬಿಸುವ ಕಲ್ಲುಗಳು

Last Updated 7 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮುದಗಲ್: ಸುತ್ತಲಿನ ಗುಡ್ಡಗಳಲ್ಲಿನ ಕಲ್ಲುಗಳು ನೈಸರ್ಗಿಕ ಚೆಲುವನ್ನು ಸವಿದು ಉಲ್ಲಾಸ ತುಂಬಿಕೊಳ್ಳುತ್ತಿವೆ. ಈ ಕಲ್ಲುಗಳಿಗೆ ಜೀವ ಇಲ್ಲದಿದ್ದರೂ, ವಿವಿಧ ಭಾವನೆಗಳನ್ನು ಮೂಡಿಸುತ್ತಿವೆ. ಇಲ್ಲಿನ ಈ ನೈಸರ್ಗಿಕ ಸಂಪತ್ತು ಮುದಗಲ್ ಕೋಟೆಯಂತೆ ಪ್ರೇಕ್ಷಣೀಯ ತಾಣವಾಗಿ ಮಾತ್ರವಲ್ಲದೆ, ಪ್ರಾಣಿ, ಪಕ್ಷಿಗಳ ಸಂಕುಲಗಳಿಗೆ ಆಶ್ರಯ ತಾಣವಾಗಿದೆ.

ಆ ಕಲ್ಲು ಈ ಕಲ್ಲು ಹಸಿರು ಹಳದಿಯ ಕಲ್ಲು
ಹೆಸರಾದ ಕಲ್ಲು ಇಲಕಲ್ಲು| ಮುಂದಿರುವ
ಮುತ್ತೀನ ಕಲ್ಲು ಮುದಗಲ್ಲು||


ಎಂದು ಐತಿಹಾಸಿಕ ಮುದಗಲ್ ಕುರಿತು ನಮ್ಮ ಜನಪದರು ಮನದುಂಬಿ ಹಾಡುತ್ತಾರೆ. ಇಲ್ಲಿನ ಕಲ್ಲಿನ ಮಹಿಮೆಯನ್ನು ಸಾರಿದ್ದಾರೆ. ಮುದಗಲ್ ಎಂದಾಕ್ಷಣ ಸುಭದ್ರ ನೆಲೆ-ನಿಲುವಿನ ಕೋಟೆ ಹಾಗೂ ಸರ್ವಜನ ಸೌಹಾರ್ದ ಸಂಭ್ರಮ ಪ್ರಖ್ಯಾತಿಯ ಮೊಹರಂ ಇಷ್ಟು, ಜನಸಾಮಾನ್ಯರ ಕಣ್ಮುಂದೆ ಬರುವುದು. ಇಲ್ಲಿನ ಗ್ರ್ಯಾನೈಟ್ ಕೂಡಾ ಬೇಡಿಕೆ ಇದೆ.

ಇಲ್ಲಿನ ಕಲ್ಲಿನ ಬಂಡೆಗಳು ಚಾರಣಿಗರನ್ನು ಹಾಗೂ ಪರಿಸರವಾದಿಗಳನ್ನು ಆಕರ್ಷಸುತ್ತಿವೆ. ಇಲ್ಲಿ ಗಣೇಶ ಮೂರ್ತಿಯ ಆಕೃತಿ ಕಲ್ಲು, ಪಿರಾಮಿಡ್ ಆಕೃತಿಯ ಕಲ್ಲುಗಳು, ಕಪ್ಪೆ, ಅಳಿಲು, ಮೀನು, ಬುಗುರಿ, ಸೈನಿಕ, ಆಮೆ, ಮೊಲ, ಜಿಂಕೆ, ಲಗೋರಿ, ಚಂದಪ್ಪ, ಪಾರಿವಾಳ ಆಕೃತಿ ಕಲ್ಲುಗಳು ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳು ಪಕ್ಷಿಗಳು ಹಾಗೂ ವಸ್ತುಗಳ ಆಕಾರದ ನೂರಾರು ಶಿಲೆಗಳು ಕಣ್ಮನ ಸೆಳೆದರೆ, ವಿವಿಧ ಜಾತಿಯ ಹೂವಿನ ಪರಿಮಳ ಅಲೆ-ಅಲೆಯಾಗಿ ಪ್ರವಾಸಿಗರನ್ನು ತಟ್ಟುತ್ತದೆ. ಮಳೆಗಾಲದಲ್ಲಿ ಇಲ್ಲಿನ ಸೊಬಗು ಬೇರೆ. ಗಿಡ ಮರಗಳಲ್ಲಿ ವಿವಿಧ ಜಾತಿಯ ಪಕ್ಷಿಗಳ ಕಲರವ ಕೇಳುಗರ ಮನಸ್ಸಿಗೆ ಮುದ ನೀಡುತ್ತದೆ.

ಸರ್ಕಾರಿ ಸ್ವಾಧೀನದಲ್ಲಿದ್ದ ಅನೇಕ ಗುಡ್ಡಗಳಲ್ಲಿ ನೈಸರ್ಗಿಕ ಸೊಬಗು ಹೆಚ್ಚಿಸುವ ನೂರಾರು ಶಿಲೆಗಳಿವೆ. ನೈಸರ್ಗಿಕವಾಗಿ ರೂಪಗೊಂಡ ಶಿಲೆಗಳು ಮನಸ್ಸು ಬಿಚ್ಚಿ ನೋಡುವ ಸಹೃದಯರಿಗೆ ಸಾವಿರಾರು ಅರ್ಥ ಕಲ್ಪಿಸುವ ಶಕ್ತಿ ಇದೆ. ಇಂಥಹ ವಿಶಿಷ್ಟ ನೈಸರ್ಗಿಕ ಸಂಪತ್ತಿನ ಶಿಲೆಗಳ ಬುಡಕ್ಕೆ ಸಿಡಿಮದ್ದು ಇಟ್ಟು ಗಣಿಗಾರಿಕೆ ನಡೆಸುತ್ತಿದ್ದಾರೆ.

ಸಿಡಿಮದ್ದಿನ ಶಬ್ದಕ್ಕೆ ಪ್ರಾಣಿ, ಪಕ್ಷಿಗಳು ಇಲ್ಲಿಂದ ಕಾಲು ಕೀಳುತ್ತಿವೆ. ವಿವಿಧ ಜಾತಿಯ ಗಿಡಗಳು ಹಾಳಾಗುತ್ತಿವೆ. ಮನಕ್ಕೆ ಉಲ್ಲಾಸ ತುಂಬುವ ಕಲ್ಲು ಬಂಡೆಗಳು ಕಾಣೆಯಾಗುತ್ತಿವೆ. ವಿಚಿತ್ರ ಆಕೃತಿ ಶಿಲೆಯ ರೋಧನೆ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಇನ್ನಾದರು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೊಂಡು ಪರಿಸರ ಸಂಪತ್ತು ನಾಶ ಮಾಡುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುವುದು ಇಲ್ಲಿನ ಪರಿಸರವಾದಿಗಳ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT