ಶನಿವಾರ, ಅಕ್ಟೋಬರ್ 16, 2021
29 °C
ನವೋದಯ ವೈದ್ಯಕೀಯ ಕಾಲೇಜಿನ‌ 14ನೇ ಘಟಿಕೋತ್ಸವ

ವೈದ್ಯಕೀಯ ಕ್ಷೇತ್ರದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿ: ರಾಜೀವ್‌ಗಾಂಧಿ ವಿವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಭಾರತದಲ್ಲಿ ವೈದ್ಯಕೀಯ ಕ್ಷೇತ್ರವು ಅತಿಹೆಚ್ಚು ಉದ್ಯೋಗ ಸೃಷ್ಟಿಸುವುದರ ಜೊತೆಗೆ ಬೃಹತ್‌ ಬಂಡವಾಳ ಹೊಂದಿರುವ ಉದ್ಯಮವಾಗಿ ಬೆಳೆಯುತ್ತಿದೆ ಎಂದು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್‌ ಎಸ್‌.ಎಂ. ಹೇಳಿದರು.

ನಗರದ ನವೋದಯ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 14ನೇ ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳು ದೇಶದ ಅಭಿವೃದ್ಧಿಯಲ್ಲಿ ಪ್ರಮುಖಪಾತ್ರ ವಹಿಸುತ್ತಿವೆ. ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯು ಈ ಎರಡೂ ಕ್ಷೇತ್ರದಲ್ಲೂ ದೇಶಕ್ಕೆ ಕೊಡುಗೆ ನೀಡುತ್ತಿದೆ. ಪಾಲಕರು ಕಷ್ಟಪಟ್ಟು ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಡಬೇಕೆನ್ನುವ ಕನಸು ಇಂದು ಈಡೇರಿದೆ ಎನ್ನುವ ಸಂತಸದಿಂದ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದಾರೆ ಎಂದರು.

ವೈದ್ಯಕೀಯ ಕ್ಷೇತ್ರವು ₹8.3 ಟ್ರಿಲಿಯನ್‌ ಹಣದ ಹೂಡಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರ ಕೂಡಾ ಆರೋಗ್ಯ ಕ್ಷೇತ್ರದಲ್ಲಿ ಹೊಸಹೊಸ ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ₹500 ದಶಲಕ್ಷ ಒದಗಿಸಿದೆ ಎಂದರು.

ಇದೇ ವೇಳೆ ಸಂಪ್ರದಾಯಕ ವೈದ್ಯಕೀಯ ಚಿಕಿತ್ಸೆಗಳನ್ನು ಕೂಡಾ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಪ್ರತಿ ಕ್ಷಣದಲ್ಲಿ ಹೊಸ ಹೊಸ ತಂತ್ರಜ್ಞಾನಗಳು ಬಳಕೆಗೆ ಬರುತ್ತಿವೆ. ಆರೋಗ್ಯ ಕ್ಷೇತ್ರಕ್ಕೆ ವಿಜ್ಞಾನ–ತಂತ್ರಜ್ಞಾನ ಪ್ರತಿಹಂತದಲ್ಲೂ ಉನ್ನತೀಕರಣವಾಗುತ್ತಿವೆ. ಆರೋಗ್ಯ ವಿಮೆ, ವಿಶ್ಲೇಷಣೆ, ಡಿಜಿಟಲ್ ಮಾರ್ಕೆಟಿಂಗ್, ಡ್ರೋಣ ವಿಭಾಗಗಳಲ್ಲಿ ಮಾನವ ಸಂಪನ್ಮೂಲಗಳ ಬೇಡಿಕೆ ಗಣನೀಯ ಏರಿಕೆ ಆಗುತ್ತಿದೆ. ಕೋವಿಡ್‌ ಮಹಾಮಾರಿಯು ಆರೋಗ್ಯ ಕ್ಷೇತ್ರದ ಮಹತ್ವವನ್ನು ಜನರಿಗೆ ತಿಳಿಸಿಕೊಟ್ಟಿದೆ ಎಂದು ತಿಳಿಸಿದರು.

ನೂತನವಾಗಿ ಪದವಿ ಪಡೆದ ವೈದ್ಯರು ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಿ ಎಂದು‌ ಶುಭ ಕೋರಿದರು.

ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ರೆಡ್ಡಿ ಮಾತನಾಡಿ, ಕಳೆದ 18 ತಿಂಗಳು ಆರೋಗ್ಯ ಕ್ಷೇತ್ರವು ಕೋವಿಡ್‌ ಕಾರಣದಿಂದ ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುತ್ತಾ ಬಂದಿದೆ. ವೈದ್ಯರಾಗುವುದು ಜೀವ ಒತ್ತೆ ಇಟ್ಟು ಇನ್ನೊಬ್ಬರ ಪ್ರಾಣ ಉಳಿಸುವುದು ಅತ್ಯಂತ ಪವಿತ್ರವಾದ ಕೆಲಸ. ಎಲ್ಲ ಪದವಿಧರರು ತಮ್ಮ ಜ್ಞಾನ ವಿಸ್ತರಿಸಿಕೊಂಡು ಅರೋಗ್ಯ ಕ್ಷೇತ್ರದಲ್ಲಿ ಸೇವೆ ‌ಒದಗಿಸಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯದಲ್ಲಿ ಯಾವುದಾದರೂ ಒಂದು ಕೌಶಲದಲ್ಲಿ ಆಳವಾಗಿ ತಿಳಿದಿರಬೇಕು. ವೈದ್ಯಕೀಯದಲ್ಲೂ ಸ್ಪರ್ಧೆ ಇದೆದೆ. ಧೈರ್ಯ, ವಿಶ್ವಾಸ, ಸಂವಹನ ಕಲೆ ವೈದ್ಯರಿಗೆ ತುಂಬಾ ಮುಖ್ಯ. ವೈದ್ಯರು ಧೈರ್ಯದಿಂದ ವಿಶ್ವಾಸದಿಂದ ಸೇವೆ ಮಾಡಬೇಕು. ಸ್ಥಿರತೆಯು ವೈದ್ಯರಿಗೆ ಬಹಳ ಮುಖ್ಯ. ಸ್ಥಿರತೆ ಇಲ್ಲದಿದ್ದರೆ ರೋಗಿಗಳು ‌ನಂಬಿಕೆ ಕಳೆದುಕೊಳ್ಳುತ್ತಾರೆ. ನೈತಿಕತೆಯು ವೈದ್ಯರಿಗೆ ಎಲ್ಲಕ್ಕಿಂತ ಮುಖ್ಯ ಎಂದು ಹೇಳಿದರು.
ಮಕ್ಕಳು ಪಾಲಕರ ಕನಸು ಈಡೇರಿಸಿದ್ದಾರೆ. ಪಾಲಕರು ಮಕ್ಕಳ ಆಸೆ ಈಡೇರಿಸಿಕೊಳ್ಳುವುದಕ್ಕೆ ನವೋದಯ ವೈದ್ಯಕೀಯ ಕ್ಯಾಂಪಸ್ ಅನುವು ಮಾಡಿಕೊಟ್ಟಿದೆ ಎಂದರು.

ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ನವೋದಯ ಶಿಕ್ಷಣ ಸಂಸ್ಥೆಯು ಪರಿಹಾರದ ಭಾಗವಾಗಿ ಕೆಲಸ ಮಾಡಿದೆ. ಆರೋಗ್ಯ ಸೇವೆ ಮಾಡುವುದರ ಜೊತೆಗೆ ರಾಯಚೂರಿನ 5 ಸಾವಿರಕ್ಕೂ‌ಹೆಚ್ಚು ಬಡವರಿಗೆ ಆಹಾರಧಾನ್ಯ ಕಿಟ್ ಕೊಡಲಾಗಿದೆ. ಈ ಮೂಲಕ‌ ಶಿಕ್ಷಣ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು‌ ನಿರ್ವಹಿಸುತ್ತಾ ಬಂದಿದೆ ಎಂದ ಹೇಳಿದರು.

ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆ, ಆಮ್ಲಜನಕ ಹಾಗೂ ವೆಂಟಿಲೇಟರ್ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಸುಧಾರಿತ ವೈದ್ಯಕೀಯ ಮೂಲ ಸೌಕರ್ಯಗಳನ್ನು ನವೋದಯ ವೈದ್ಯಕೀಯ ಕಾಲೇಜು ಹೊಂದಿದೆ. ಬದುಕು ಸರಳವಾಗಿಲ್ಲ. ಆದರೆ ಯಾವುದೇ ಸವಾಲು ಎದುರಿಸುತ್ತೇನೆ ಎನ್ನುವ ವಿಶ್ವಾಸ ಬೆಳೆಸಿಕೊಳ್ಳಬೇಕು. ಮಾನವೀಯ ಸೇವೆಗೆ ಯಾವುದೇ ಗಡಿಯಿಲ್ಲ ಎಂದು ನೂತನವಾಗಿ ವೈದ್ಯಕೀಯ ಸೇವೆ ಆರಂಭಿಸುತ್ತಿರುವವರಿಗೆ ಕಿವಿಮಾತು ಹೇಳಿದರು.

ಕೋವಿಡ್‌ ಕಾರಣ ಸಮಾರಂಭ ಸರಳವಾಗಿ ಆಯೋಜಿಸಲಾಗಿತ್ತು. ಚಿನ್ನದ ಪದಕ ನೀಡುವುದನ್ನು ರದ್ದುಗೊಳಿಸಲಾಗಿತ್ತು. 2018, 2019 ಹಾಗೂ 2020 ನೇ ಸಾಲಿನಲ್ಲಿ ಪಾಸಾದ ವೈದ್ಯಕೀಯ ವಿದ್ಯಾರ್ಥಿಗಳಿಗೆಲ್ಲ ಪದವಿಪ್ರದಾನ ಮಾಡಲಾಯಿತು.

ಕಾಲೇಜಿನ ಉಪಪ್ರಾಂಶುಪಾಲ ಡಾ.ಎ.ಎಸ್.ಆನಂದ ಸ್ವಾಗತಿಸಿದರು. ಡಾ.ಜಯಚಂದ್ರ, ಕುಲಸಚಿವ ಟಿ.ಶ್ರೀನಿವಾಸ, ಮೆಡಿಕಲ್ ಸೂಪರಿಂಟೆಡೆಂಟ್ ಡಾ.ಬ್ರಿಗೇಡಿಯರ್‌ ಎ.ಜಿ. ಮಹೇಂದ್ರಕರ್ ಹಾಗೂ ಕಾಲೇಜಿನ ಪ್ರಾಧ್ಯಾಪಕರು ಇದ್ದರು.

ವೈಷ್ಣವಿ ಶೆಟ್ಟಿ, ವೈಷ್ಣವಿ ಮಾಹುಲಿ ಪ್ರಾರ್ಥಿಸಿದರು. ಉಮಂಗಾ, ಲಾವಣ್ಯಾ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.