ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿತಾಣ ಪುನಃಶ್ಚೇತನ ಅಗತ್ಯ: ಡಿಸಿ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆ
Last Updated 4 ಜನವರಿ 2020, 14:00 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಪ್ರವಾಸಿಗರನ್ನು ಆಕರ್ಷಿಸುವ ರೀತಿ ಅವುಗಳನ್ನು ಪುನಃಶ್ಚೇತನ ಮಾಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಮೊದಲು ಗುರುತಿಸಿ, ಆ ನಂತರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ಅವುಗಳನ್ನು ಅಭಿವೃದ್ಧಿಪಡಿಸಬೇಕು. ಅಧಿಕಾರಿಗಳು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಅಲ್ಲಿನ ನೈಜ ಸ್ಥಿತಿ ಅರಿವಾಗುತ್ತದೆ. ಕೂಡಲೇ ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶರಣುಬಸವ ಅವರಿಗೆ ತಿಳಿಸಿದರು.

ಗುಂಡಲಬಂಡಾ ಜಲಪಾತ, ಶ್ರೀ ರಾಘವೇಂದ್ರ ಸ್ವಾಮಿ ಏಕಶಿಲಾ ಬೃಂದಾವನ ಬಿಚ್ಚಾಲೆ, ಲಿಂಗಸೂಗೂರು ತಾಲ್ಲೂಕಿನ ಅಂಕಲಿ ಮಠ, ಸಜ್ಜಲಗುಡ್ಡ ಶ್ರೀ ಜಗನ್ಮಾತೆ ಶರಣಮ್ಮ ತಾಯಿ ದೇವಸ್ಥಾನ, ಶ್ರೀ ನರಸಿಂಹ ದೇವಸ್ಥಾನ, ದೇವಸೂಗೂರಿನ ಶ್ರೀ ಸೂಗೂರೇಶ್ವರ ದೇವಸ್ಥಾನ, ಶ್ರೀ ದತ್ತಾತ್ರೇಯ ದೇವಸ್ಥಾನ ಕುರ್ವಾಪುರ, ಗುರಗುಂಟಾದ ಶ್ರೀ ಅಮರೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಲಾಗಿದೆ. ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹೇಳಿದರು.

ಪ್ರವಾಸಿ ತಾಣಗಳ ಬಗ್ಗೆ ಜಿಲ್ಲೆಯ ಬಸ್ ಹಾಗೂ ರೈಲು ನಿಲ್ದಾಣಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿವರಣೆ ಫಲಕ ಹಾಕಿ ಮಾಹಿತಿ ನೀಡಬೇಕು. ಫಲಕಗಳು ವರ್ಣರಂಜಿತವಾಗಿ ಕಾಣಬೇಕು. ತಾಣ ಇರುವ ಸ್ಥಳ ಮತ್ತು ಸಂಪರ್ಕಿಸಬೇಕಾದ ನಂಬರ್‌ಗಳನ್ನು ಬೋರ್ಡ್‌ನಲ್ಲಿ ವಿವರವಾಗಿ ತಿಳಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರವಾಸಿ ತಾಣಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಆಕಾಶವಾಣಿ ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಚಾರ ಪಡಿಸಬೇಕು. ಪ್ರವಾಸಿ ತಾಣಕ್ಕೆ ಒಂದು ವಾರ, ತಿಂಗಳಿಗೆ ಎಷ್ಟು ಜನರು ಭೇಟಿ ನೀಡುತ್ತಾರೆ, ಯಾವ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎನ್ನುವುದರ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೈಗೊಳ್ಳಲಾದ 2017–18ನೇ ಸಾಲಿನ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ವಿಳಂಬಕ್ಕೆ ಆಸ್ಪದ ಇಲ್ಲದಂತೆ ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗಾದ್ರಟಗಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ, ಸಜ್ಜಲಗುಡ್ಡ ಗ್ರಾಮದ ಶ್ರೀ ಜಗನ್ಮಾತೆ ಶರಣಮ್ಮ ತಾಯಿ ದೇವಸ್ಥಾನದ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ, ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕ್ಷೇತ್ರದಲ್ಲಿ ಯಾತ್ರಿನಿವಾಸ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಕೂಡಲೇ ಆರಂಭಿವಿಸುವಂತೆ ತಾಕೀತು ಮಾಡಿದರು.

ನಗರದ ಪುರಾತನ ಕೋಟೆಯನ್ನು ಪುನಃಶ್ಚೇತನಗೊಳಿಸಿ ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಪಡಿಸುವಂತೆ ಸೂಚಿಸಬೇಕು. ಮಾವಿನ ಕೆರೆ ಸುತ್ತಮುತ್ತಲೂ ಬೆಳದಿರುವ ಮುಳ್ಳಿನಗಿಡಗಳನ್ನು ತರೆವುಗೊಳಿಸಿ ಶುಚಿತ್ವ ಕಾಪಾಡಬೇಕು ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್. ಕುಲಕರ್ಣಿ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಶರಣಪ್ಪ ಪಟ್ಟೇದ್, ವೆಂಕಟಸಿಂಗ್ ಹಜಾರ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT