ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು | ಬತ್ತಿದ ಕೆರೆಗಳು: ಕುಸಿದ ಅಂತರ್ಜಲಮಟ್ಟ

ಕೆರೆ ನಿರ್ವಹಣೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ
ಬಿ.ಎ. ನಂದಿಕೋಲಮಠ
Published 13 ಆಗಸ್ಟ್ 2024, 6:02 IST
Last Updated 13 ಆಗಸ್ಟ್ 2024, 6:02 IST
ಅಕ್ಷರ ಗಾತ್ರ

ಲಿಂಗಸುಗೂರು: ಎರಡು ವರ್ಷಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಹಳ್ಳ–ಕೊಳ್ಳ, ಕೆರೆಗಳಲ್ಲಿ ನೀರು ಸಂಗ್ರಹಣಾ ಕೊರತೆ ಎದುರಾಗಿದೆ. ಕೆರೆಗಳ ಭರ್ತಿಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹೋಗಿದ್ದರಿಂದ ಬಹುತೇಕ ಕೆರೆಗಳು ಬತ್ತಿದ್ದು, ಅಂತರ್ಜಲಮಟ್ಟವೂ ಕುಸಿಯುತ್ತಿದೆ. 

ತಾಲ್ಲೂಕಿನಾದ್ಯಂತ 20ಕ್ಕೂ ಹೆಚ್ಚು ಕೆರೆಗಳಿವೆ. ಈ ಪೈಕಿ ಕೆಲ ಕೆರೆಗಳು ಒತ್ತುವರಿಯಾಗಿವೆ. ಇರುವ ಕೆರೆಗಳು ನಿರ್ವಹಣೆಯಾಗದೆ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಪಾಳುಬಿದ್ದಿವೆ. ಪ್ರತಿ ವರ್ಷ ನಿರ್ವಹಣೆ ಮತ್ತು ಮೇಲುಸ್ತುವಾರಿ ಹೆಸರಲ್ಲಿ ಕೋಟ್ಯಂತರ ಹಣ ದುರ್ಬಳಕೆ ಮಾಡುತ್ತಿವೆ. ಮೀನುಗಾರಿಕೆ ಇಲಾಖೆ ಮೀನು ಸಾಕಾಣಿಕೆಗೆ ಟೆಂಡರ್ ನೀಡುತ್ತಿದ್ದರೂ ಕೆರೆ ಭರ್ತಿ ಅಥವಾ ದುರಸ್ತಿಗೆ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ.

ತಾಲ್ಲೂಕಿನ ಉಳಿಮೇಶ್ವರ, ಬೊಮ್ಮನಹಾಳ, ಮಟ್ಟೂರು, ರಾಂಪೂರ, ಕರಡಕಲ್ಲ, ಮಲ್ಲಾಪುರ, ಕನ್ನಾಪುರಹಟ್ಟಿ ಸೇರಿ 16 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ. ಕೆರೆಗಳಿಂದ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿಯೇ ಕೆರೆ ನಿರ್ಮಿಸಲಾಗಿದೆ. ಆದಾಗ್ಯೂ ಯಾವೊಂದು ಕೆರೆಯಿಂದ ಪೂರ್ಣ ಪ್ರಮಾಣದ ನೀರಾವರಿ ಸೌಲಭ್ಯ ಕಲ್ಪಿಸದಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತವೆ.

1975ರಲ್ಲಿ ರಾಂಪುರ (ಭೂಪುರ) ಕೆರೆಯನ್ನು ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದೆ. ಅಂದಾಜು 110 ಎಕರೆ ವಿಸ್ತೀರ್ಣ ಹೊಂದಿದ್ದು ಕೆಳ ಭಾಗದ ಜಮೀನಿಗೆ ನೀರು ಹರಿಸಲು ಕೆರೆ ತೂಬು (ಕಾಲುವೆ ಗೇಟ್‍) ನಿರ್ಮಿಸಿದೆ. ಆಗಾಗ ಕಾಲುವೆ ದುರಸ್ತಿ ಮಾಡಿಸುತ್ತಾರೆ. ಇದೇ ರೀತಿ ಯರಗುಂಟಿ, ಹಿರೆಉಪ್ಪೇರಿ, ಮಾಚನೂರು ಕೆರೆಗಳಲ್ಲಿ ಸೌಲಭ್ಯ ಇವೆ. ಆದರೆ, ಇಂದಿಗೂ ಸಮರ್ಪಕ ನೀರಾವರಿ ಮರೀಚಿಕೆಯಾಗಿದೆ ಎಂಬುದು ರೈತರ ಆರೋಪ.

ತಾಲ್ಲೂಕಿನಾದ್ಯಂತ ನಾರಾಯಣಪುರ ಬಲದಂಡೆ ನಾಲೆ, ನವಲಿ ರಾಂಪುರ ಜಡಿಶಂಕರಲಿಂಗ ಏತ ನೀರಾವರಿ, ಸೇರಿ ಇತರೆ ಏತ ನೀರಾವರಿ ಯೋಜನೆಗಳು ಅಸ್ತಿತ್ವದಲ್ಲಿವೆ. ಈ ಯೋಜನೆಗಳ ವ್ಯಾಪ್ತಿಯಡಿ ಬರುವ ಕೆರೆಗಳಿಗೆ ನೀರು ಭರ್ತಿ ಮಾಡುವ ಯಾವೊಂದು ಯೋಜನೆ ಕೈಗೆತ್ತಿಕೊಳ್ಳದಿರುವುದು ಸಣ್ಣ ನೀರಾವರಿ ಇಲಾಖೆ ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೀನುಗಾರಿಕೆ ಇಲಾಖೆ ಟೆಂಡರ್ ನೀಡಿ ಹಣ ಸಂಗ್ರಹಿಸುತ್ತಿದೆ. ಸಣ್ಣ ನೀರಾವರಿ ಇಲಾಖೆ ನೀರಾವರಿ ಸೌಲಭ್ಯದ ಹೆಸರಲ್ಲಿ ಪ್ರತಿ ವರ್ಷ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಯಾವೊಂದು ಇಲಾಖೆ ಅಥವಾ ಚುನಾಯಿತ ಪ್ರತಿನಿಧಿಗಳು ಕೆರೆ ಭರ್ತಿಯತ್ತ ಚಿಂತನೆ ಮಾಡುತ್ತಿಲ್ಲ’ ಎಂದು ರೈತ ಮುಖಂಡ ರುದ್ರಗೌಡ ಆರೋಪಿಸುತ್ತಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮಾತನಾಡಿ, ‘ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಯವರ ವ್ಯಾಪ್ತಿಯಲ್ಲಿ ಕೆರೆಗಳಿವೆ. ಅವುಗಳ ನಿರ್ವಹಣೆ ಮತ್ತು ಮೇಲುಸ್ತುವಾರಿ ಆಯಾ ಇಲಾಖೆಗಳೆ ನಿರ್ವಹಿಸುತ್ತಿವೆ. ಯಾವ ಇಲಾಖೆಗಳೂ ಕೆರೆ ಭರ್ತಿಗೆ ಸಂಬಂಧಿಸಿ ನಮ್ಮನ್ನು ಸಂಪರ್ಕ ಮಾಡಿಲ್ಲ’ ಎಂದು ಹೇಳಿದರು.

ನೀರಾವರಿ ಸೌಲಭ್ಯಕ್ಕೆ ನಿರ್ಮಿಸಿದ ರಾಂಪುರ (ಭೂಪುರ) ಕೆರೆ ಮೀನುಗಾರಿಕೆ ಮತ್ತು ಉದ್ಯೋಗ ಖಾತ್ರಿ ಯೋಜನೆಗೆ ಹೂಳು ತೆಗೆಯುವುದಕ್ಕೆ ಸೀಮಿತವಾಗಿದೆ. ಕೆರೆ ಬತ್ತಿ ಅಂತರ್ಜಲಮಟ್ಟ ಕುಸಿದಿದೆ
–ಮಲ್ಲಿಕಾರ್ಜುನ ಪೊಲೀಸ್‍ ಪಾಟೀಲ, ರೈತ ಮುಖಂಡ ಭೂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT