ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಬಂಡವಾಳಶಾಹಿಗಳ ಲಾಭಕ್ಕಾಗಿ ಎನ್‍ಇಪಿ ಜಾರಿ

ಐಸಾ ರಾಷ್ಟ್ರೀಯ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಹೇಳಿಕೆ
Last Updated 7 ಮಾರ್ಚ್ 2022, 6:34 IST
ಅಕ್ಷರ ಗಾತ್ರ

ಸಿಂಧನೂರು: ಕಾರ್ಪೊರೇಟ್ ಧಣಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ ಬರುವ ದಿನಗಳಲ್ಲಿ ದೇಶದಲ್ಲಿ ತಳ ಸಮುದಾಯಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತಗೊಳ್ಳಲಿದ್ದಾರೆ. ಜೊತೆಗೆ ದೇಶದಲ್ಲಿ ನಿರುದ್ಯೋಗ ತಾಂಡವವಾಡಲಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಎನ್.ಸಾಯಿ ಬಾಲಾಜಿ ಕಳವಳ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಐಸಾ ಸಂಘಟನೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಎನ್‍ಇಪಿ ಕರಡಿನಲ್ಲಿ ಡಿಜಿಟಲ್, ಆನ್‍ಲೈನ್ ಶಿಕ್ಷಣದ ಕುರಿತು ಪದೇಪದೆ ಪ್ರಸ್ತಾಪಿಸಲಾಗಿದೆ. ಆದರೆ ಮೀಸಲಾತಿ ಬಗ್ಗೆ ಎಲ್ಲಿಯೂ ಚಕಾರವೆತ್ತಿಲ್ಲ. ಸಾರ್ವಜನಿಕ ಶಿಕ್ಷಣದ ಬಲ ಕುಗ್ಗಿಸುವ ಭಾಗವಾಗಿಯೇ ಈ ನೀತಿಯನ್ನು ತರಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಆನ್‍ಲೈನ್ ಶಿಕ್ಷಣ ಕಂಪನಿ ಇಂದು ಸಾವಿರಾರು ಕೋಟಿ ರೂಪಾಯಿ ಮೊತ್ತದ ವ್ಯವಹಾರ ಮಾಡಿದೆ. ಅದರ ಮಾಲೀಕರು ಮೂರ್ನಾಲ್ಕು ವರ್ಷದಲ್ಲಿಯೇ ಕೋಟ್ಯಾಧೀಶರಾಗಿದ್ದಲ್ಲದೇ ಕ್ರಿಕೆಟ್ ಪ್ರಾಂಚೈಸಿಗಳನ್ನು ತೆಗೆದುಕೊಂಡು ಪಂದ್ಯಾವಳಿ ನಡೆಸುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಇದು ಅಘಾತಕಾರಿ ಬೆಳವಣಿಯಾಗಿದೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಗೊಳಿಸಲು ಹೊರಟಿದೆ. ಕಾರ್ಪೊರೇಟ್ ಕಂಪನಿಗಳ ₹1.4 ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಬಜೆಟ್ ಇಲ್ಲದಂತಾಗಿದೆ. ಶೈಕ್ಷಣಿಕ ತಾರತಮ್ಯದ ಮೂಲಕ ತಳ ಸಮುದಾಯಗಳ ವಿದ್ಯಾರ್ಥಿಗಳನ್ನು ತಾಂತ್ರಿಕ, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣದಿಂದ ದೂರವಿಡಲಾಗುತ್ತಿದೆ. ಶುಲ್ಕ ಹೆಚ್ಚಳ, ವಿದ್ಯಾರ್ಥಿ ವೇತನ ಸಕಾಲಕ್ಕೆ ನೀಡದೇ ಇರುವುದು ಸೇರಿದಂತೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಸಾಯಿ ಬಾಲಾಜಿ ಆರೋಪಿಸಿದರು.

ಐಸಾ ರಾಜ್ಯ ಸಂಚಾಲಕ ಕಿಶನ್ ಮಾತನಾಡಿ, ನಿಜವಾದ ಸ್ವಾತಂತ್ರ್ಯ ಇನ್ನೂ ನಮಗೆ ಸಿಕ್ಕಿಲ್ಲ. ವೈಜ್ಞಾನಿಕ ಶಿಕ್ಷಣವನ್ನು ಮರೆಮಾಚಿ ವಿದ್ಯಾರ್ಥಿಗಳಿಗೆ ಜಾತಿ ಭೇದ ಕೆರಳಿಸುವಂತಹ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಅಸಮಾನ ಶಿಕ್ಷಣವನ್ನು ಪ್ರತಿಯೊಬ್ಬರ ವಿದ್ಯಾರ್ಥಿ ಪ್ರತಿರೋಧಿಸುವ ಮೂಲಕ ಸಮಾನ ಶಿಕ್ಷಣಕ್ಕಾಗಿ ಒಗ್ಗಟ್ಟಾಗಬೇಕಿದೆಎಂದು ಹೇಳಿದರು.

ಎಐಸಿಸಿಟಿಯು ಮುಖಂಡ ನಾಗರಾಜ್ ಪೂಜಾರ್, ಭೀಮ್ ಆರ್ಮಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕುರುಗೋಡು, ಕಾರ್ಮಿಕ ಮುಖಂಡ ಬಿ.ಎನ್.ಯರದಿಹಾಳ, ವಿದ್ಯಾರ್ಥಿ ಮುಖಂಡರಾದ ಪ್ರವೀಣ್, ಪ್ರದೀಪ್ ಇದ್ದರು. ಕಾರ್ಮಿಕ ಮುಖಂಡ ಬಸವರಾಜ ಎಕ್ಕಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT