ಪ್ಲಾಸ್ಟಿಕ್‌ ಚೀಲ ಬಳಕೆ ಮಾಡಿದರೆ ಜೋಕೆ!

ಶನಿವಾರ, ಏಪ್ರಿಲ್ 20, 2019
27 °C
ನಗರ ಸಂಚಾರ: ರಾಯಚೂರು ನಗರಸಭೆಯಿಂದ ಯಶಸ್ವಿಯಾದ ಕಾರ್ಯಾಚರಣೆ

ಪ್ಲಾಸ್ಟಿಕ್‌ ಚೀಲ ಬಳಕೆ ಮಾಡಿದರೆ ಜೋಕೆ!

Published:
Updated:
Prajavani

ರಾಯಚೂರು: ನಗರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಬಳಕೆ ಮಾಡುವುದು ಹಾಗೂ ಮಾರಾಟ ಮಾಡುವುದರ ಮೇಲೆ ನಗರಸಭೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.

ನಿಗದಿತ ಪ್ರಮಾಣಕ್ಕಿಂತ ಕಡಿಮೆ ಮೈಕ್ರಾನ್‌ ಹೊಂದಿರುವ ಪ್ಲಾಸ್ಟಿಕ್‌ ಚೀಲಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಬಾರದು ಎನ್ನುವ ಸೂಚನೆಯನ್ನು ನಗರಸಭೆ ಪೌರಾಯುಕ್ತರು ಈ ಮೊದಲು ಕಾಲಕಾಲಕ್ಕೆ ನೀಡುತ್ತಾ ಬಂದಿದ್ದರು. ಸೂಚನೆ ಪಾಲಿಸದ ಅಂಗಡಿಗಳ ಮೇಲೆ ನಗರಸಭೆ ಸಿಬ್ಬಂದಿ ದಾಳಿ ನಡೆಸಿ, ಪ್ಲಾಸ್ಟಿಕ್‌ ಜಪ್ತಿ ಮಾಡಿಕೊಂಡಿದ್ದರು. ಆದರೂ ಪ್ಲಾಸ್ಟಿಕ್‌ ಬಳಕೆ ಕ್ರಮೇಣ ಯತ್ತೇಚ್ಛವಾಗಿ ತೆರೆಮರೆಯಲ್ಲಿ ಆರಂಭವಾಗುತ್ತಿತ್ತು. ಕೋರ್ಟ್‌ ಆದೇಶ ಅನುಷ್ಠಾನ ಮಾಡುವುದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಿತು. ಹೀಗಾಗಿ ಪ್ಲಾಸ್ಟಿಕ್‌ ಚೀಲ ಬಳಕೆ ಮಾಡುವ ಬೀದಿ ವ್ಯಾಪಾರಿಗಳು ಹಾಗೂ ಇತರೆ ಅಂಗಡಿಗಳ ಪರವಾನಿಗೆ ರದ್ದುಪಡಿಸುವ ಬಗ್ಗೆ ಎಚ್ಚರಿಕೆಯನ್ನು ನೀಡಲಾಯಿತು.

ನಗರಸಭೆ ಸೂಚನೆ ಪರಿಪಾಲಿಸುವ ಅನಿವಾರ್ಯತೆ ಹಾಗೂ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಚೀಲಗಳ ಮಾರಾಟ ಬಹುತೇಕ ನಿಂತು ಹೋಗಿದೆ. ಇದರ ಪರಿಣಾಮ ನಗರದ ಯಾವುದೇ ಬಡಾವಣೆಯ ಕಿರಾಣಿ ಅಂಗಡಿಗಳು ಹಾಗೂ ಇತರೆ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಚೀಲ ಸಿಗುತ್ತಿಲ್ಲ. ಅಂಗಡಿಗೆ ಕಾಯಂ ಬರುವ ಗ್ರಾಹಕರಿಗೆ ವ್ಯಾಪಾರಿಗಳು ಈ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಮನೆಯಿಂದ ಬರುವಾಗ ಚೈ ಚೀಲ ಅಥವಾ ಮನೆಯಲ್ಲಿ ಸಂಗ್ರಹಿಸಿಕೊಂಡ ಪ್ಲಾಸ್ಟಿಕ್‌ ಚೀಲ ತೆಗೆದುಕೊಂಡು ಬರುವಂತೆ ಹೇಳುತ್ತಿದ್ದಾರೆ.

ಸಂತೆ ಸಾಮಗ್ರಿ ಅಥವಾ ಹಣ್ಣು ಹಂಪಲು ಖರೀದಿಗೆ ಹೋಗುವಾಗ ಮನೆಯಿಂದ ಕೈ ಚೀಲ ತೆಗೆದುಕೊಂಡು ಹೋಗಬೇಕು ಎನ್ನುವ ತಿಳಿವಳಿಕೆ ಜನರಲ್ಲಿ ಮನೆಮಾಡ ತೊಡಗಿದೆ. ಒಂದು ವೇಳೆ ಕೈ ಚೀಲವಿಲ್ಲದೆ ಖರೀದಿಗೆ ಹೋದರೆ, ಹೋಟೆಲ್‌, ರೆಸ್ಟೊರೆಂಟ್‌, ಬಾರ್‌ಗಳು, ತರಕಾರಿ ಅಂಗಡಿಗಳು, ಕಿರಾಣಿ ಹಾಗೂ ಖಾನಾವಳಿಗಳಲ್ಲಿ ತೆಳುಬಟ್ಟೆ ಚೀಲಕ್ಕಾಗಿ ಹೆಚ್ಚುವರಿಯಾಗಿ ₹3 ಕೊಡಬೇಕಾಗುತ್ತದೆ. ಬೇಕರಿ, ಪುಸ್ತಕ ಮಳಿಗೆ ಸೇರಿದಂತೆ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್‌ ಚೀಲದ ಬದಲಾಗಿ ಬಟ್ಟೆಚೀಲದಲ್ಲಿ ಸಾಮಗ್ರಿಗಳನ್ನು ಹಾಕಿ ಕೊಡುತ್ತಾರೆ. ಪರಿಸರ ಕಾಳಜಿ ಇಲ್ಲದಿದ್ದರೂ ಶಾಸನ ವಿಧಿಸಿದ ನಿಯಮ ಪಾಲನೆಯತ್ತ ರಾಯಚೂರು ನಗರ ಹೆಜ್ಜೆ ಇಟ್ಟಿರುವುದು ಗಮನಾರ್ಹ.

‘ಪ್ಲಾಸ್ಟಿಕ್‌ ಚೀಲಗಳ ಬಳಕೆ ಇತ್ತೀಚೆಗೆ ಮಿತಿಮೀರಿ ಹೋಗಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ ಕಸ ಬಿದ್ದುಕೊಂಡಿರುವುದು ಕಾಣುತ್ತದೆ. ಬೀದಿಗಳಲ್ಲಿ ತಿರುಗಾಡುವ ಪ್ರಾಣಗಳಿಗೂ ಪ್ಲಾಸ್ಟಿಕ್‌ನಿಂದ ಸಮಸ್ಯೆಯಾಗುತ್ತಿದೆ. ಮೂವತ್ತು ವರ್ಷಗಳ ಹಿಂದೆ ಎಲ್ಲ ಕಡೆಗೂ ಪ್ಲಾಸ್ಟಿಕ್‌ ಚೀಲಗಳು ಸಿಗುತ್ತಿರಲಿಲ್ಲ. ಈಗ ಸಣ್ಣ ವ್ಯಾಪಾರಿಗಳ ಹತ್ತಿರವೂ ಪ್ಲಾಸ್ಟಿಕ್‌ ಚೀಲವಿದೆ. ಮೊದಲಿನಂತೆ ಎಲ್ಲರೂ ಬಟ್ಟೆ ಚೀಲ ಕೈಯಲ್ಲಿ ಹಿಡಿದುಕೊಂಡು ಮಾರುಕಟ್ಟೆಗೆ ಹೋಗುವುದನ್ನು ರೂಢಿಮಾಡಿಕೊಳ್ಳಬೇಕು. ಪರಿಸರವನ್ನು ಕಾಪಾಡಿಕೊಳ್ಳಬೇಕು. ₹3 ಕೊಟ್ಟು ಬಟ್ಟೆ ಚೀಲ ಖರೀದಿಸಿರುವುದನ್ನು ಮರುಬಳಕೆ ಮಾಡಬಹುದು. ನಗರಸಭೆಯಿಂದ ಒಳ್ಳೆಯ ಕೆಲಸವಾಗಿದೆ’ ಎನ್ನುತ್ತಾರೆ ಕಿರಾಣಿ ವ್ಯಾಪಾರಿ ಸತ್ಯನಾರಾಯಣ.

ಪರ್ಯಾಯ ಚೀಲಗಳು

ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಷೇಧ ಮಾಡಲಾಗಿದೆ. ಪರ್ಯಾಯವಾಗಿ ಬಟ್ಟೆಚೀಲ ಹಾಗೂ ಪೇಪರ್‌ ಚೀಲಗಳು ಸುಲಭವಾಗಿ ಸಿಗುವಂತಾಗಬೇಕು. ಕೆಲವು ಚಿಲ್ಲರೆ ವ್ಯಾಪಾರಿಗಳು ಈಗಲೂ ನಗರಸಭೆ ಸಿಬ್ಬಂದಿ ಕಣ್ಣು ತಪ್ಪಿಸಿ ಪ್ಲಾಸ್ಟಿಕ್‌ ಬಳಕೆ ಮಾಡುತ್ತಿದ್ದಾರೆ. ಚಿಕನ್‌, ಮಟನ್‌ ಹಾಗೂ ಮೀನು ಮಾರಾಟ ಮಳಿಗೆಯನ್ನು ಇನ್ನೂ ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ. ಇಂಥ ವ್ಯಾಪಾರಿಗಳಿಗೆ ಪ್ಲಾಸ್ಟಿಕ್‌ ಬಳಕೆಗೆ ಪರ್ಯಾಯವಾಗಿ ಬಳಸಬಹುದಾದ ಚೀಲಗಳನ್ನು ಪರಿಚಯಿಸುವ ಅಗತ್ಯವಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !