ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ಬಹಿರಂಗಕ್ಕೆ ಮುಂದುವರಿದ ಸಮಾಜಗಳ ಆಕ್ಷೇಪ: ಪುಟ್ಟರಂಗಶೆಟ್ಟಿ

Published 29 ಅಕ್ಟೋಬರ್ 2023, 15:34 IST
Last Updated 29 ಅಕ್ಟೋಬರ್ 2023, 15:34 IST
ಅಕ್ಷರ ಗಾತ್ರ

ರಾಯಚೂರು: ‘ಜಾತಿಗಣತಿ ಮಾಹಿತಿ ಬಹಿರಂಗಪಡಿಸಲು ಮುಂದುವರಿದ ಸಮಾಜಗಳು ಬಿಡುತ್ತಿಲ್ಲ. ಹಾಗಂತ ನಾವು ಸುಮ್ಮನೆ ಕುಳಿತಿಲ್ಲ. ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಚಾಮರಾಜನಗರದ ಶಾಸಕ ಹಾಗೂ ಭಗೀರಥ ಉಪ್ಪಾರ ಸಮಾಜ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕಾಂತರಾಜು ವರದಿಯಿಂದ ಮಾಹಿತಿ ಪಡೆಯಬೇಕು ಎನ್ನುವ ಸಂದರ್ಭದಲ್ಲಿ ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ತಡೆದರು. ಉಪ್ಪಾರ ಸಮಾಜ ಡಿ.ದೇವರಾಜು ಅರಸು ಅವರನ್ನು ಎಂದಿಗೂ ಮರೆಯಬಾರದು. ನಮ್ಮ‌ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಯತ್ನಿಸಿದರು. ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಅವರು ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದಾರೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಯಿಂದ ಶಾಸಕ ಸ್ಥಾನದವರೆಗೆ ಸಮಾಜದವರು ರಾಜಕೀಯವಾಗಿ ಮುಂದೆ ಬರಬೇಕು. ಯಾವ ರಾಜಕೀಯ ಪಕ್ಷಕ್ಕೆ ಸಮಾಜವನ್ನು ಮುಂದೆ ತರಬೇಕು ಎನ್ನುವ ಇಚ್ಛಾಶಕ್ತಿ ಇದೆಯೋ ಅಂಥವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಕಳೆದ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಕೇವಲ ಏಳು ಕೋಟಿ ಕೊಟ್ಟಿದ್ದರು. ಅದರಿಂದ ಏನು ಮಾಡಲು ಸಾಧ್ಯ? ಹಿಂದುಳಿದ ವರ್ಗದಲ್ಲಿ 96 ಜಾತಿಗಳಿವೆ. ಅದರನ್ವಯ ಮೀಸಲಾತಿ ಕೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ನಗರ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ,‘ಸಮಾಜದಲ್ಲಿ ಒಬ್ಬಿಬ್ಬರು ರಾಜಕೀಯವಾಗಿ ಆಯ್ಕೆಯಾದರೆ ಉಪಯೋಗವಿಲ್ಲ. ಅಂಥವರು ತಮ್ಮ ಸಮಾಜ ಬಿಟ್ಟು ಬೇರೆಯವರಿಗೆ ಒತ್ತು ಕೊಡುತ್ತಾರೆ. ಸಮಾಜದ ವಿದ್ಯಾರ್ಥಿಗಳು ಎಲ್ಲ ರಂಗದಲ್ಲಿ ಮುಂದೆ ಬರಬೇಕು. ಉಪ್ಪಾರ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಗಬೇಕು’ ಎಂದರು.

‘ಸಮಾಜ ಮುಂದೆ ಬರಬೇಕಾದರೆ ಮೀಸಲಾತಿ ಬಹಳ ಮುಖ್ಯ. ರಾಜಕೀಯ ಸ್ಥಾನಮಾನ ಸಿಗಬೇಕು. ಕಳೆದ ಬಾರಿ ಕಲ್ಯಾಣ ಮಂಟಪಕ್ಕೆ ₹ 50 ಲಕ್ಷ ನೀಡಲಾಗಿತ್ತು. ಈ ಬಾರಿ ಸಮಾಜ ಕಾರ್ಯಕ್ಕೆ ಶಾಸಕರ ಅನುದಾನದಡಿ ₹15 ಲಕ್ಷ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮಲದಕಲ್‌ನ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರು ಸಾನ್ನಿಧ್ಯ ವಹಿಸಿದ್ದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ವೆಂಕೋಬ, ಕೆಪಿಎಸ್‌ಸಿ ಮಾಜಿ ಸದಸ್ಯ ಶ್ರೀಕಾಂತ ವಕೀಲ ಮಾತನಾಡಿದರು.

ಕ್ಯಾನ್ಸರ್ ತಜ್ಞ ಡಾ.ರಮೇಶ ಸಿ.ಸಾಗರ ವಿಶೇಷ ಉಪನ್ಯಾಸ ನೀಡಿದರು. ಸಮಾಜದ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಾಜದ ವೈದ್ಯರು ಹಾಗೂ ಸಾಧಕರನ್ನು ಗೌರವಿಸಲಾಯಿತು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ದೇವಣ್ಣ ನವಲಕಲ್, ಸಂಘದ ಅಧ್ಯಕ್ಷ ಎನ್.ಬುಗ್ಗಾರೆಡ್ಡಿ ದೇವನಪಲ್ಲಿ, ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ರಾಮಾಂಜನೇಯ, ಸಮಾಜದ ಮುಖಂಡರಾದ ಬನ್ನಪ್ಪ ಹುಲಿಬೆಟ್ಟ, ಎಂ.ಸುಭಾಷಚಂದ್ರ, ರಮೇಶ ಮೇಟಿ, ಶ್ರೀನಿವಾಸ ಶೆಟ್ಟಿ, ಶ್ರೀನಿವಾಸ ಅಮ್ಮಾಪುರ, ನಿಂಗಪ್ಪ ಮನಗೂಳಿ, ತಿಮ್ಮಪ್ಪ ಬುಳ್ಳಾಪುರ, ಆದಿರಾಜ ಆದೋನಿ, ದೇವರಾಜ ಒಡವಟ್ಟಿ, ಚಂದ್ರಬಂಡ ಮಾಣಿಕೆಪ್ಪ, ಪಿ.ಸಿದ್ದಲಿಂಗ ನಾಗೋಲಿ ಇದ್ದರು. ಪಾಂಡುರಂಗ ಕಾಡ್ಲೂರು, ಬಿ.ಎಸ್.ಮಾಲತಿ ಹಾಗೂ ಲಕ್ಷ್ಮಣ ನಿರೂಪಿಸಿದರು.

ಡಿ.ದೇವರಾಜು ಅರಸುರನ್ನು ಮರೆಯದಿರಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ 80 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT