ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಸಂಗೋಪನಾ ಇಲಾಖೆ ಕಚೇರಿ ಸ್ಥಳಾಂತರಕ್ಕೆ ವಿರೋಧ

Last Updated 2 ಸೆಪ್ಟೆಂಬರ್ 2021, 15:19 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರ್ಗಿಗೆಸ್ಥಳಾಂತರ ಮಾಡುವುದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಕಳೆದ ಅನೇಕ ವರ್ಷಗಳಿಂದ ರಾಯಚೂರಿನಲ್ಲಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಯಾವುದೇ ಸಮಸ್ಯೆಗಳಿಲ್ಲದೇ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರ ಕಾರ್ಯವೈಖರಿ ಬಗ್ಗೆ ಕಲ್ಯಾಣ ಕರ್ನಾಟಕದ ಯಾವ ಜಿಲ್ಲೆಗಳಿಂದಲೂ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ.

ಸುಸೂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಇಲಾಖೆಯ ಯೋಜನೆಗಳ ತ್ವರಿತ ಅನುಷ್ಠಾನ ಕಾರಣ ನೀಡಿ ಜಂಟಿ ನಿರ್ದೇಶಕರ ಕಚೇರಿಯನ್ನು ಏಕಾಏಕಿ ಕಲಬುರ್ಗಿಗೆ ಸ್ಥಳಾಂತರಿಸುವುದು ಖಂಡನೀಯ. ಕಲ್ಯಾಣ ಕರ್ನಾಟಕದಲ್ಲಿ ರಾಯಚೂರು ಜಿಲ್ಲೆ ಭೌಗೋಳಿಕವಾಗಿ ಅತ್ಯಂತ ಮಧ್ಯಭಾಗದಲ್ಲಿದೆ. ಎಲ್ಲಾ ಜಿಲ್ಲೆಗಳಿಗೂ ಸಮಾನಾಂತರವಿದೆ. ಈಗಾಗಲೇ ಎಲ್‍ಐಸಿ ವಿಭಾಗೀಯ ಕಚೇರಿ, ಸಹಕಾರ ಇಲಾಖೆಯ ಜಂಟಿ ನಿಬಂಧಕರ ಕಚೇರಿ ಸುಸೂತ್ರವಾಗಿ ಎಲ್ಲಾ ಜಿಲ್ಲೆಗಳಿಗೂ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿವೆ ಎಂದರು.

ರಾಯಚೂರಿನಿಂದ ಕಲಬುರ್ಗಿಗೆ ಸ್ಥಳಾಂತರಿಸುವ ನಿರ್ಧಾರ ಕೈಬಿಡಬೇಕು. ಸ್ಥಳಾಂತರ ಮಾಡಿದ್ದಲ್ಲಿ ಕಲ್ಯಾಣ ಕರ್ನಾಟಕದ ಇತರೇ ಜಿಲ್ಲೆಗಳೊಂದಿಗೆ ಒಟ್ಟುಗೂಡಿ ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹೋರಾಟಗಾರರಾದ ಬಸವರಾಜ ಕಳಸ, ಅಶೋಕ ಕುಮಾರ ಜೈನ್, ವೀರೇಶ ಹಿರಾ, ವೀರೇಶ ಕುಮಾರ, ವಿನೋದರೆಡ್ಡಿ, ವಿಶ್ವನಾಥಪಟ್ಟಿ, ಚಂದ್ರು ಭಂಡಾರಿ, ಶಾಂತಕುಮಾರ, ಮಲ್ಲೇಶ ಗಧಾರ, ಕೆ.ಇ ಕುಮಾರ,ಹುಲಿಗೆಪ್ಪ,ಎಂ.ಆರ್.ಬೇರಿ, ನಾಗಪ್ಪ, ವೆಂಕಟೇಶ, ಸಾದೀಕ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT