ಕವಿತಾಳ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಬದಲಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದಲ್ಲಿ ಸೋಮವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
‘ಗ್ರಾಮದ ಪ್ರೌಢಶಾಲೆಯಲ್ಲಿ ಅಂದಾಜು 180 ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ವರ್ಷ ಕವಿತಾಳದ ಪರೀಕ್ಷಾ ಕೇಂದ್ರದ ಬದಲಿಗೆ ಬ್ಯಾಗವಾಟ್ ಗ್ರಾಮದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಸೇರಿಸಿರುವುದು ಮಕ್ಕಳಿಗೆ ಪರೀಕ್ಷೆಗೆ ಹೋಗಿ ಬರಲು ತೊಂದರೆಯಾಗುತ್ತದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಬ್ಯಾಗವಾಟ್ ಕ್ರಾಸ್‌ನಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಿ ಬರಲು ಬಸ್ ಸೌಲಭ್ಯವಿಲ್ಲ. ಅಂದಾಜು 4 ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯ ಆಗುವುದಿಲ್ಲ. ಹೀಗಾಗಿ ಬಾಗಲವಾಡದಲ್ಲಿಯೇ ಪರೀಕ್ಷಾ ಕೇಂದ್ರ ತೆರಯಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಅವರು, ‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಗಲವಾಡದಲ್ಲಿಯೇ ಪರೀಕ್ಷಾ ಕೇಂದ್ರ ತೆರೆಯಬೇಕು ಈ ಕುರಿತು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡು ವುದಾಗಿ’ ಹೇಳಿದರು.
ತಿಪ್ಪಣ್ಣ ವಕೀಲ, ಯಮನಪ್ಪ ಯಾದವ್, ಮಲ್ಲನಗೌಡ, ವೆಂಕೋಬ, ಅಮರೇಶ ಕಾವಲಿ, ಪ್ರವೀಣಗೌಡ, ವಿರುಪಾಕ್ಷಿ, ಆಂಜನೇಯ ಯಾದವ್, ನಾಗರಾಜ ಭೋವಿ, ಅಮರೇಶ, ಸಂಘಟನೆ ಮುಖಂಡರಾದ ಗಂಗಾಧರ ಬಾಗಲವಾಡ, ಮೌನೇಶ ಕೋರಿ, ನಾಗರಾಜ ಹಿಂದಿನಮನಿ, ಜಗಧೀಶ ಸಾಲಮನಿ, ವಿಶ್ವನಾಥ, ಕೆ.ಚಿನ್ನಪ್ಪ, ಹುಚ್ಚರಡ್ಡಿ, ಬಸವರಾಜ ಸಾಲ್ಮನಿ, ಪಂಪಣ್ಣ ಚಾಗಿ, ರಾಜು, ವಿರೇಶ ಚಾಗಿ, ಮಲ್ಲಪ್ಪ ಮತ್ತು ಉಮೇಶ ಮೇತ್ರಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.