ಸೋಮವಾರ, ಆಗಸ್ಟ್ 8, 2022
21 °C

ಜಿಲ್ಲೆಗೆ ಏಮ್ಸ್: ಒಗ್ಗಟ್ಟಿನ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಹಿಂದುಳಿದ ರಾಯಚೂರು ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಂಜೂರಾತಿಗಾಗಿ ಒಕ್ಕೊರಲ ಹೋರಾಟದ ಅವಶ್ಯಕತೆ ಇದೆ ಎಂದು ಜನ ಸಂಗ್ರಾಮ ಪರಿಷತ್ ಸಂಚಾಲಕ ಹಾಗೂ ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಏಮ್ಸ್ ಮಂಜೂರಾತಿಗಾಗಿ ಭಾನುವಾರ ನಡೆದ ವಿವಿಧ ಸಂಘಟನೆಗಳ ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಆರೋಗ್ಯ ಕ್ಷೇತ್ರದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೇರೆ ಜಿಲ್ಲೆಯಂತೆ ಬೃಹತ್ ಕೈಗಾರಿಕೆಗಳು, ಯೋಜನೆಗಳು ಇಲ್ಲಿಲ್ಲ. ಇದಕ್ಕೆ ರಾಜಕೀಯ ನಾಯಕರ ಅಸಡ್ಡೆಯೇ ಕಾರಣ. ಈ ಹಿಂದೆ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಗಾಗಿ ಹೋರಾಟ ನಡೆದಿತ್ತು. ಪ್ರಹ್ಲಾದ್ ಜೋಶಿ, ಆರ್.ವಿ ದೇಶಪಾಂಡೆ, ಜಗದೀಶ ಶೆಟ್ಟರ್ ಹಾಗೂ ಸಿದ್ಧರಾಮಯ್ಯನವರ ಕಾರ್ಯವೈಖರಿಯಿಂದ ಕೈ ತಪ್ಪಿತು ಎಂದು
ದೂರಿದರು.

ಈ ಭಾಗದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಗೌರವವಿದೆ. ಆದರೆ, ರಾಯಚೂರು ಜಿಲ್ಲೆಯ ಕುರಿತು ಅವರಿಗೆ ಮಲ ತಾಯಿಧೋರಣೆ ಇದೆ. ಕಾರಣ ಹಲವಾರು ಮಹತ್ವದ ಯೋಜನೆಗಳು ಕಲಬುರ್ಗಿ ಜಿಲ್ಲೆಯ ಪಾಲಾಗಿವೆ. ಆದರೆ, ಏಮ್ಸ್ ಕಲಬುರ್ಗಿಯ ಪಾಲಾಗಲು ಬಿಡುವುದಿಲ್ಲ. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರು ಪ್ರತಿಷ್ಠೆಯನ್ನು ಬದಿಗೊತ್ತಿ ಸಂಘಟನಾತ್ಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಜಿಲ್ಲೆಗೆ ಏಮ್ಸ್ ಸ್ಥಾಪನೆಗೆ ರಾಜಕೀಯ ನಾಯಕರ ಹಾಗೂ ಸಂಘಟನೆಗಳ ಮುಖಂಡರನ್ನೊಳ ಕಾರ್ಯಕಾರಿ ಸಮಿತಿಯ ರಚನೆ ಮಾಡಬೇಕು. ಈ ಬಗ್ಗೆ ಬೃಹತ್ ಮಟ್ಟದ ಸಮಾವೇಶ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ,‘ ಜಿಲ್ಲೆಯಲ್ಲಿ ರಾಜಕೀಯ ನಾಯಕರ ಬಣ ರಾಜಕೀಯ ಪಕ್ಷಾತೀತ ಹೋರಾಟದ ಕೊರತೆಯಿಂದಾಗಿ ಮಹತ್ವದ ಯೋಜನೆಗಳು ಕೈ ತಪ್ಪಿ ಅಭಿವೃದ್ಧಿಗೆ ಕೊಡಲಿಪೆಟ್ಟು ಬಿದ್ದಿದೆ. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆ ಮಾಡುವ ಮಹತ್ವದ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಮತದಾರರ ಋಣ ತಿರಿಸುವ ನಿಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳು ಏಮ್ಸ್ ತರುವ ಕೆಲಸಕ್ಕೆ ಮುಂದಾಗಬೇಕು ಎಂದು
ಒತ್ತಾಯಿಸಿದರು.

ಸಭೆಯಲ್ಲಿ ಹೋರಾಟಗಾರ ಬಸವರಾಜ ಕಳಸ, ನಾಗರಾಜ ತುಪ್ಪದ್, ಹಿರಿಯ ಪತ್ರಕರ್ತ ವೆಂಕಟಸಿಂಗ್ ಮಾತನಾಡಿದರು.

ಹರವಿ ನಾಗನಗೌಡ ನಗರಸಭೆ ಸದಸ್ಯ ಬಸವರಾಜ ಪಾಟೀಲ ದರೂರು, ರಾಮಚಂದ್ರರೆಡ್ಡಿ, ಖಾಜಾ ಅಸ್ಲಾಂ ಅಹ್ಮದ್, ರಜಾಕ್ ಉಸ್ತಾದ್,ಅಶೋಕ ಕುಮಾರ ಜೈನ್, ಜಾನ್‍ವೆಸ್ಲಿ,  ಹನುಮಂತಪ್ಪ ಗವಾಯಿ, ಶಿವಕುಮಾರ ಯಾದವ, ಸಂಗಮೇಶ ಮಂಗಾನವರ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು