ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಆದೇಶದ ವಿರುದ್ಧ ಆಕ್ರೋಶ

ಕೃಷಿ ಕೂಲಿಕಾರರ ಸಂಘದಿಂದ ತಾ.ಪಂ ಕಚೇರಿ ಮುಂದೆ ಪ್ರತಿಭಟನೆ
Last Updated 10 ಏಪ್ರಿಲ್ 2022, 14:55 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಸಿಂಧನೂರು: ನರೇಗಾ ಯೋಜನೆಯಡಿ ಕೆಲಸಗಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ದಿನಕ್ಕೆ ಎರಡು ಬಾರಿ ಸೆರೆಹಿಡಿದು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಕೇಂದ್ರ ಸರ್ಕಾರದ ಅಸಂಬದ್ಧ ಆದೇಶವನ್ನು ವಿರೋಧಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ತಾಲ್ಲೂಕು ಘಟಕ ಶನಿವಾರ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟಿಸಿತು.

ಕೂಲಿಕಾರರ ಮುಖ ಸ್ಪಷ್ಟವಾಗಿ ಕಾಣಬೇಕಾದರೆ ಗುಣಮಟ್ಟದ ಸ್ಮಾರ್ಟ್ ಫೋನ್ ಬೇಕಾಗುತ್ತದೆ. ಆದರೆ ಮೇಟ್‍ಗಳ ಮತ್ತು ಕೂಲಿಕಾರರ ಹತ್ತಿರವಾಗಲಿ ಅಂತಹ ಸ್ಮಾರ್ಟ್ ಫೋನ್ ಇರುವುದಿಲ್ಲ. ಕೂಲಿಕಾರರು ದಿನದ ನಿಗದಿತ ಕೆಲಸ ಮುಗಿದ ನಂತರ ಸಂಜೆ 5 ಗಂಟೆವರೆಗೆ ಕೆಲಸದ ಸ್ಥಳದಲ್ಲೇ ಇರಬೇಕೆಂಬ ನಿರ್ದೇಶನವೂ ಸಹ ಕೂಲಿಕಾರರಿಗೆ ಕಿರುಕುಳ ಕೊಟ್ಟು ಕೆಲಸಕ್ಕೆ ಬಾರದಂತೆ ಮಾಡುವ ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.

ನರೇಗಾ ಕೂಲಿಯನ್ನು ಇತ್ತೀಚಿಗೆ ಪರಿಷ್ಕರಿಸಿದ್ದು ಏನೇನೂ ಸಾಲದು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿರುವಾಗ ಸರ್ಕಾರ ಹೆಚ್ಚಿಸಿದ ಕೂಲಿ ದರ ಏರಿಕೆ ಅಮಾನವೀಯವಾಗಿದೆ. ದಿನಗೂಲಿ ಕೇವಲ ₹ 4 ರಿಂದ ₹ 21 ರಷ್ಟು ಮಾತ್ರ ಏರಿಕೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಗ್ರಾಮೀಣ ಜನರ ಪರಿಸ್ಥಿತಿ ಕಣ್ಣಿಗೆ ಕಾಣುತ್ತಿಲ್ಲ. ಕೂಲಿಕಾರರಿಗೆ ದಿನಕ್ಕೆ ₹ 600 ವೇತನ ನೀಡಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ ಒತ್ತಾಯಿಸಿದರು.

ಕಳೆದ ವರ್ಷಕ್ಕಿಂತ ಈ ಬಾರಿ ಬಜೆಟ್‌ನಲ್ಲಿ ಕಡಿಮೆ ಅನುದಾನ ನೀಡಲಾಗಿದೆ. ನರೇಗಾ ಯೋಜನೆಗಾಗಿ ನೀಡುವ ಅನುದಾನವನ್ನು ಸರ್ಕಾರ ಕಡಿತ ಮಾಡಿರುವುದು ಖಂಡನೀಯ. ಪ್ರತಿಯೊಂದು ಕುಟುಂಬಕ್ಕೆ ಕನಿಷ್ಠ ವರ್ಷದಲ್ಲಿ 200 ದಿನ ಕೆಲಸ ಕೊಡಬೇಕು. ಕೂಲಿಕಾರರಿಗೆ ಬಾಕಿ ಇರುವ ವೇತನ ಕೂಡಲೇ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಮೇಟಿಗಳು ಕಡ್ಡಾಯವಾಗಿ 8ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ಪಾಸ್ ಆಗಿರಬೇಕೆಂಬ ಅಸಂಬದ್ಧ ಷರತ್ತನ್ನು ಕೈಬಿಡಬೇಕು. ಓದಲು ಬರೆಯಲು ಬರುವವರಿಗೂ ಮೇಟಿಗಳಾಗಿ ನೇಮಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಸಮುದಾಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಮುಖಂಡರಾದ ಗೇಸುದರಾಜ ಮಕಾಂದರ್, ಗರೀಬ್‍ಸಾಬ ಕೊಡ್ಲಿ, ವೀರೇಶ ಸೋಮಲಾಪುರ, ಸರ್ವರ್‍ಸಾಬ, ಹುಲಿಗೆಮ್ಮ, ಶೇಖಮ್ಮ, ಜ್ಯೋತಿ, ಬೀರಪ್ಪ, ಅಳ್ಳಪ್ಪ, ಮಲ್ಲಿಕಾರ್ಜುನ, ಸಾದಪ್ಪ, ಮಹಮ್ಮದ್‍ಸಾಬ, ತಿಮ್ಮಣ್ಣ, ಅಂಬಣ್ಣ, ವೀರೇಶ ಕುರಕುಂದಿ, ಈರಪ್ಪ ಅಮರಾಪುರ, ಈರಪ್ಪ ಮಡಿವಾಳ, ಶಂಕ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT