ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಭರದಿಂದ ಸಾಗಿದ ಭತ್ತ ನಾಟಿ ಕಾರ್ಯ

ಸಿಂಧನೂರು ತಾಲ್ಲೂಕಿನಲ್ಲಿ 59,500 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ನಾಟಿ ಗುರಿ
Last Updated 19 ಆಗಸ್ಟ್ 2021, 11:10 IST
ಅಕ್ಷರ ಗಾತ್ರ

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಈ ಬಾರಿ ಜುಲೈ ಕೊನೆಯ ವಾರದಲ್ಲಿ ನೀರು ಬಿಟ್ಟಿರುವುದರಿಂದ ಈ ವರ್ಷ ಪ್ರತಿ ವರ್ಷಕ್ಕಿಂತ ಮುಂಚಿತವಾಗಿಯೇ ಭತ್ತ ನಾಟಿ ಕಾರ್ಯ ಆರಂಭವಾಗಿದೆ.

ಜೂನ್ ತಿಂಗಳಲ್ಲಿಯೇ ನಿರೀಕ್ಷೆಗೂ ಮೀರಿ ಮಳೆಯಾದ ಕಾರಣ ರೈತರು ಮುಂಗಾರು ಬೆಳೆಗೆ ಹಂಗಾಮಿಗೆ ಮುಂಚಿತವಾಗಿಯೇ ಭೂಮಿಯನ್ನು ಹದ ಮಾಡಿಕೊಂಡಿದ್ದರು. ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆ ಸುರಿಯಿ ತಾದರೂ ಜುಲೈ ಮಧ್ಯದಿಂದ ಇಲ್ಲಿಯವರೆಗೆ ನಿತ್ಯ ಮೋಡ ಮುಸುಕಿದ ವಾತಾವರಣ ಇರುತ್ತದೆ ಹೊರತು, ಮಳೆ ಮಾತ್ರ ಬಾರದಾಗಿದೆ.
ಇದರಿಂದ ಭತ್ತದ ನಾಟಿ ಕಾರ್ಯ ಪ್ರಾರಂಭದಲ್ಲಿದ್ದ ಚುರುಕು ಈಗ ಇಲ್ಲದಂತಾಗಿದೆ.

‘ಕಾಲುವೆಯ ನೀರಿನಿಂದಲೇ ಗದ್ದೆ ತೋಯಿಸಿ ಕೊಳ್ಳಬೇಕಾದ ಕಾರಣ ಎಲ್ಲರಿಗೂ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಈ ಸಮಯದಲ್ಲಿ ಮಳೆ ಬಂದಿದ್ದರೆ ಭತ್ತ ನಾಟಿ ಕಾರ್ಯ ಮುಗಿಯುತ್ತಿತ್ತು’ ಎನ್ನುತ್ತಾರೆ ಪ್ರಗತಿಪರ ರೈತ ಅಶೋಕ ಗೌಡ ಗದ್ರಟಗಿ.

‘ನಮ್ಮ ನಿರೀಕ್ಷೆಯ ಪ್ರಕಾರ ವಾಡಿಕೆಯಂತೆ ಜೂನ್ 1 ರಿಂದ ಇಲ್ಲಿಯ ತನಕ 231 ಮಿಮೀ ಮಳೆಯಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೆ 285 ಮಿಮೀ ವಾಸ್ತವವಾಗಿ ಮಳೆಯಾಗಿದೆ. ಶೇ 23 ರಷ್ಟು ಮಳೆ ಅಧಿಕವಾಗಿದೆ. ಆದರೆ ಜೂನ್ ತಿಂಗಳಿನಲ್ಲಿಯೇ ಅತಿಹೆಚ್ಚು ಮಳೆ ಸುರಿದಿರುವುದರಿಂದ ಭತ್ತ ನಾಟಿ ಮತ್ತು ಖುಷ್ಕಿ ಪ್ರದೇಶದ ಬೆಳೆಗಳಿಗೆ ಮಳೆಯ ಅವಶ್ಯಕತೆಯಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಶಾಂತ ತಿಳಿಸಿದರು.

ಸಿಂಧನೂರು ತಾಲ್ಲೂಕಿನಲ್ಲಿ 87,503 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಅದರಲ್ಲಿ 59,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಹೊಂದಿದ್ದು, ಸದ್ಯ 39,301 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. ಇನ್ನುಳಿದ ಜಮೀನಿನಲ್ಲಿ ಆಗಸ್ಟ್ ಮುಗಿಯುವುದರೊಳಗೆ ಪೂರ್ಣಗೊಳ್ಳಲಿದೆ ಎಂದು ಡಾ.ಪ್ರಶಾಂತ ವಿವರಿಸಿದರು.

ಈ ಬಾರಿ ಬಿಪಿಟಿ ಸೋನಾ, ಆರ್‌ಎನ್‍ಆರ್, ಗಂಗಾವತಿ ಸೋನಾ ಮತ್ತಿತರ ತಳಿಯ ಭತ್ತ ನಾಟಿ ಮಾಡಲಾಗಿದ್ದು, ಮುಂಗಾರು ಹಂಗಾಮಿಗೆ ಸರಿಯಾದ ಸಮಯದಲ್ಲಿ ಭತ್ತ ನಾಟಿ ಮಾಡುತ್ತಿರುವುದರಿಂದ ಉತ್ತಮ ಇಳುವರಿ ಬರಬಹುದು ಎಂಬ ನಿರೀಕ್ಷೆಯಿದೆ. ಜೊತೆಗೆ ಗೊಬ್ಬರಮತ್ತು ಕ್ರಿಮಿನಾಶಕ ಪೂರೈಕೆಯನ್ನು ಕೃಷಿ ಪತ್ತಿ ಸಹಕಾರ ಸಂಘ ಮತ್ತು ರೈತ ಸೇವಾ ಸಹಕಾರ ಸಂಘಗಳಿಗೆ ವಿತರಿಸಲಾಗಿದ್ದು, ರೈತರ ಸಮುದಾಯಕ್ಕೆ ಸಮರ್ಪಕವಾಗಿ ತಲುಪಿರುವ ತೃಪ್ತಿ ತಮಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT