ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಿನ ಕ್ರಮಕೈಗೊಳ್ಳದ ಅಧಿಕಾರಿಗಳು; ಉದ್ಯಾನ ಮೀಸಲು ಜಾಗದಲ್ಲಿ ಅದ್ವಾನ!

ನಗರ ಸಂಚಾರ
Last Updated 5 ಮೇ 2019, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದ ಹೃದಯಭಾಗ ಮಾವಿನಕೆರೆ ಉದ್ಯಾನ ಎದುರಿನ ಅಜಾದ ನಗರದಲ್ಲಿ ಉದ್ಯಾನವನ ನಿರ್ಮಿಸುವ ಉದ್ದೇಶಕ್ಕಾಗಿ ಜಾಗವೊಂದನ್ನು ಮೀಸಲಿಟ್ಟು ಹಲವು ವರ್ಷಗಳು ಕಳೆದರೂ ನಗರಸಭೆಯಿಂದ ಯಾವುದೇ ಕ್ರಮ ಜರುಗಿಸಿಲ್ಲ!

ಕನಿಷ್ಠ ಪಕ್ಷ ಉದ್ಯಾನ ಜಾಗಕ್ಕೆ ಬೇಲಿ ಅಥವಾ ಆವರಣ ಗೋಡೆ ನಿರ್ಮಿಸಿ ಸಂರಕ್ಷಿಸುವ ಕೆಲಸವೂ ಆಗಿಲ್ಲ. ಪಾಳುಬಿದ್ದಿರುವ ಉದ್ಯಾನದ ಜಾಗವು ಹಂದಿ, ಬೀದಿನಾಯಿಗಳು ಮತ್ತು ಬಿಡಾಡಿ ದನಗಳ ಬಿಡಾರವಾಗಿ ಬದಲಾಗಿದೆ. ಇದನ್ನೆ ನೆಪ ಮಾಡಿಕೊಂಡಿರುವ ನೆರೆಹೊರೆ ಕಟ್ಟಡಗಳಲ್ಲಿರುವ ಜನರು ಕಸಮುಸುರೆ ಎತ್ತಿಹಾಕಿ ತಿಪ್ಪೆಗುಂಡೆ ನಿರ್ಮಿಸಿದ್ದಾರೆ.

ಉದ್ಯಾನದ ಪಕ್ಕದಲ್ಲೇ ಖಾಸಗಿ ಆಸ್ಪತ್ರೆಯೊಂದು ಇದ್ದು, ಉತ್ತೇಚ್ಛವಾಗಿ ಚರಂಡಿ ನೀರನ್ನು ಉದ್ಯಾನದ ಜಾಗಕ್ಕೆ ಹರಿಬಿಡುತ್ತಿದ್ದಾರೆ. ನಗರಸಭೆಯಿಂದ ಉದ್ಯಾನ ಅಭಿವೃದ್ಧಿ ಮಾಡದೆ ಇರುವ ಒಂದು ಸಮಸ್ಯೆ, ಈಗ ಹತ್ತಾರು ಹೊಸ ಸಮಸ್ಯೆಗಳು ಸೃಷ್ಟಿ ಆಗುವುದಕ್ಕೆ ಕಾರಣವಾಗಿದೆ. ಉದ್ಯಾನದಲ್ಲಿನ ಅತಿಕ್ರಮಣ ತಡೆಯಬೇಕು. ಚರಂಡಿ ನೀರು ಹರಿದು ಬಿಡುವುದರ ವಿರುದ್ಧ ಕಡಿವಾಣ ಹಾಕುವಂತೆ ಕೋರಿ ನಗರಸಭೆ ಪರಿಸರ ಎಂಜಿನಿಯರ್‌ ಅವರಿಗೆ ಕೆಲವು ಪ್ರಜ್ಞಾವಂತ ಸಂಘ–ಸಂಸ್ಥೆಗಳು ದೂರು ಸಲ್ಲಿಸಿವೆ. ದೂರು ಆಧರಿಸಿ ನಗರಸಭೆ ಅಧಿಕಾರಿಗಳಲು ಸ್ಥಳ ಪರಿಶೀಲಿಸಿಕೊಂಡು ಹೋಗಿ ಹಲವು ತಿಂಗಳುಗಳಾಗಿವೆ. ಆದರೂ ಶುಚಿತ್ವ ಕಾಪಾಡಲು ಯಾವುದೇ ಕ್ರಮ ಜರುಗಿಸಿಲ್ಲ ಎನ್ನುವ ಅಳಲು ಅಲ್ಲಿರುವ ಜನರದ್ದು.

ಖಾಸಗಿ ಆಸ್ಪತ್ರೆಯಿಂದ ಹರಿದು ಬರುತ್ತಿರುವ ಚರಂಡಿ ತ್ಯಾಜ್ಯದಿಂದಾಗಿ ಹಂದಿಗಳು, ನಾಯಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿವೆ. ಉದ್ಯಾನವು ರೋಗ ಹೊರಸೂಸುವ ತಾಣವಾಗಿ ಮಾರ್ಪಟ್ಟಿದೆ.

ನಿಯಮಾನುಸಾರ, ನಗರದಲ್ಲಿರುವ ಉದ್ಯಾನಗಳನ್ನು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ರುಡಾ) ಅಥವಾ ನಗರಸಭೆಯಿಂದ ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡಬೇಕಿತ್ತು. ಸದ್ಯ ಅಜಾದನಗರ ಉದ್ಯಾನದ ಜಾಗವು ಸುತ್ತಮುತ್ತಲಿನ ಜನವಸತಿಗಳಿಗೆ ಸಮಸ್ಯೆಗಳನ್ನು ಹರಡುತ್ತಿದ್ದು, ಇನ್ನಾದರೂ ನಗರಸಭೆಯು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಒತ್ತಾಯ.

‘ನಗರದ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಕೆಲಸವನ್ನು ನಗರಸಭೆ ಅಧಿಕಾರಿಗಳು ಮಾಡಬೇಕು. ಕರ ಸಂಗ್ರಹಿಸುವುದಕ್ಕೆ ಆಸಕ್ತಿ ತೋರಿಸುವ ನಗರಸಭೆಯು, ಉದ್ಯಾನಗಳನ್ನು ಏಕೆ ಅಭಿವೃದ್ಧಿ ಮಾಡುತ್ತಿಲ್ಲ? ಎಂಬುದು ತಿಳಿಯುತ್ತಿಲ್ಲ. ಉದ್ಯಾನಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಎಚ್‌ಕೆಆರ್‌ಡಿಬಿ ಮತ್ತು ಅಮೃತ ಯೋಜನೆಗಳಿಂದಲೂ ಅನುದಾನ ಬಂದಿದೆ. ನಗರದ ಕೆಲವು ಬಡಾವಣೆಗಳಲ್ಲಿ ಮಾತ್ರ ಉದ್ಯಾನಗಳನ್ನು ಸರಿಯಾಗಿ ಸಂರಕ್ಷಣೆ ಮಾಡಲಾಗಿದೆ. ಅಜಾದ ನಗರ ಉದ್ಯಾನವನ್ನು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಅಜಾದ್‌ ನಗರ ನಿವಾಸಿ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT