ಶೇಂಗಾ ಎಣ್ಣೆ ಯಂತ್ರದ ಹೆಸರಿನಲ್ಲಿ ವಂಚನೆ!

ಬುಧವಾರ, ಜೂಲೈ 17, 2019
23 °C

ಶೇಂಗಾ ಎಣ್ಣೆ ಯಂತ್ರದ ಹೆಸರಿನಲ್ಲಿ ವಂಚನೆ!

Published:
Updated:
Prajavani

ಹಟ್ಟಿ ಚಿನ್ನದ ಗಣಿ: ಶೇಂಗಾಬೀಜ ಮತ್ತು ಅದರಿಂದ ಎಣ್ಣೆ ತೆಗೆಯುವ ಯಂತ್ರವನ್ನು ಒದಗಿಸಿ ಪ್ರತಿ ತಿಂಗಳು ₹15 ಸಾವಿರ ನಿರ್ವಹಣೆ ವೆಚ್ಚ ನೀಡುವುದಾಗಿ ಭರವಸೆ ಹುಟ್ಟಿಸಿ 30 ಜನರಿಂದ ತಲಾ ₹1 ಲಕ್ಷ ಹಣವನ್ನು ಪಡೆದುಕೊಂಡಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಕಂಪೆನಿ ಬಾಗಿಲು ಮುಚ್ಚಿಕೊಂಡು ಮಾಯವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಹೈದರಾಬಾದ್‌ನ ಗ್ರೀನ್‌ ಗೋಲ್ಡ್‌ ಬಯೋಟೆಕ್‌ ಕಂಪೆನಿ ಹೆಸರಿನಲ್ಲಿ ಶ್ರೀಕಾಂತ ಜಿನ್ನಾ ಎಂದು ಆರು ತಿಂಗಳು ಹಿಂದೆ ಜನರಿಗೆ ಪರಿಚಯ ಮಾಡಿಕೊಂಡಿದ್ದನು. ಮನೆಯಲ್ಲಿ ಕುಳಿತು ಆದಾಯ ಪಡೆಯುವುದಕ್ಕೆ ಸಂಬಂಧಿಸಿದಂತೆ ಜಾಹೀರಾತು ಕೂಡಾ ನೀಡಿದ್ದನು. ಇದನ್ನು ನಂಬಿದ ಕೋಠಾ, ನಿಲೋಗಲ್, ಗೆಜ್ಜಲಗಟ್ಟಾ, ಆನ್ವರಿ, ರೋಡಲಬಂಡಾದ ಕೆಲವು ರೈತರು ಹೈದರಾಬಾದ್‌ನ ಉಪ್ಪಲದಲ್ಲಿರುವ ಕಂಪನಿಗೆ ಭೇಟಿ ನೀಡಿದ್ದರು. 24 ತಿಂಗಳು ಕೆಲಸ ಒದಗಿಸುವ ಭರವಸೆಯ ಬಗ್ಗೆ ಛಾಪಾ ಕಾಗದ ಒಪ್ಪಂದವನ್ನು ಮಾಡಿಕೊಂಡು ಬಂದಿದ್ದಾರೆ.

ಕರಾರುಪತ್ರಗಳನ್ನು ಇಟ್ಟುಕೊಂಡು ತಲಾ₹1 ಲಕ್ಷ ಹಣ ನೀಡಿದ್ದಾರೆ. ಆರು ತಿಂಗಳಾದರೂ ಶ್ರೀಕಾಂತ ಮೊಬೈಲ್‌ ಸಂಪರ್ಕಕ್ಕೆ ಸಿಕ್ಕಿಲ್ಲ. ಗಾಬರಿಯಾದ ಜನರು ಹೈದರಾಬಾದ್‌ನಲ್ಲಿ ಕಂಪೆನಿಗೆ ಹೋಗಿ ನೋಡಿದರೆ ಬಾಗಿಲು ಮುಚ್ಚಿರುವುದು ಗೊತ್ತಾಗಿದೆ. ಕೂಡಲೇ ಉಪ್ಪಲ ಪೊಲೀಸ್‌ ಠಾಣೆಯಲ್ಲಿ ವಂಚನೆಗೊಳಗಾದ ಬಗ್ಗೆ ದೂರು ದಾಖಲಿಸಿ ಬಂದಿದ್ದಾರೆ.

ರಾಯಚೂರು ಜಿಲ್ಲಾ ಪೊಲೀಸ್‌ ವರಿಷ್ಠಧಿಕಾರಿ ಸಿ.ಬಿ. ವೇದಮೂರ್ತಿ ಅವರು ಈಚೆಗೆ ಹಟ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ತಮ್ಮ ಅಳಲು ಹೇಳಿಕೊಂಡರು. ಕರಾರು ಪತ್ರಗಳು ಮತ್ತು ಇತರೆ ದಾಖಲೆಗಳನ್ನು ಕೊಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರೆ, ವಂಚಕನನ್ನು ಪತ್ತೆ ಹಚ್ಚಲಾಗುವುದು ಎಂದು ಎಸ್‌ಪಿ ಭರವಸೆ ನೀಡಿದ್ದಾರೆ.

‘ಆದಷ್ಟು ಬೇಗನೆ ತಲೆ ಮರೆಸಿಕೊಂಡಿರುವ ಶ್ರೀಕಾಂತ ಜಿನ್ನಾನನ್ನು ಬಂಧಿಸಿ ಹಣ ಹಿಂದಿರುಗಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ವಂಚನೆಗೊಳಗಾದ ರೈತರು ಒತ್ತಾಯಿಸುತ್ತಿದ್ದಾರೆ.

‘ಗ್ರೀನ್‌ಗೋಲ್ಡ್‌ ಬಯೋಟೆಕ್ ಕಂಪನಿಯ ಮಾಲೀಕ ಸೇರಿ ಸಿಬ್ಬಂದಿ ಎಲ್ಲರೂ ಕಂಪನಿ ಬಂದ್ ಮಾಡಿ ಪರಾರಿಯಾಗಿದ್ದಾರೆ. ಕೂಡಲೆ ಅವರನ್ನು ಪತ್ತೆ ಹೆಚ್ಚಿ ಕಠಿಣ ಕಾನೂನು ಕ್ರಮಕೈಗೊಳ್ಳಬೇ’ ಎನ್ನುವುದು ವಂಚನೆಗೊಳಗಾದ ಚಿದಾನಂದ ಅವರ ಒತ್ತಾಯ.

‘ನಮಗೆ ದಾಖಲೆ ಸಮೇತ ದೂರು ನೀಡಿದರೆ ಪೊಲೀಸ್ ಅಧಿಕ್ಷಕರ ಸೂಚನಾನುಸಾರ ನಾವು ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಗಂಗಪ್ಪ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !