ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಹಾರುಬೂದಿ ದೂಳಿನಿಂದ ತತ್ತರಿಸಿದ ಜನ

ಆರ್‌ಟಿಒ, ಪರಿಸರ, ಕೈಗಾರಿಕೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ
Published : 10 ಅಕ್ಟೋಬರ್ 2023, 5:29 IST
Last Updated : 10 ಅಕ್ಟೋಬರ್ 2023, 5:29 IST
ಫಾಲೋ ಮಾಡಿ
Comments

ಶಕ್ತಿನಗರ /ರಾಯಚೂರು: ಆರ್‌ಟಿಪಿಎಸ್ ಹಾರುಬೂದಿ ದೂಳಿನಿಂದ ಜನರು ತತ್ತರಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಗಳೇ ಕಣ್ಣಿಗೆ ಕಾಣುತ್ತಿಲ್ಲ. ಲಾರಿ, ಟಿಪ್ಪರ್ ಮತ್ತು ಟ್ಯಾಂಕರ್‌ ಮೂಲಕ ಆರ್‌ಟಿಪಿಎಸ್‌ನ ಬೂದಿಯನ್ನು ಒಯ್ಯುವಾಗ ಬೂದಿ ರಸ್ತೆಗಳಲ್ಲಿ ಬೀಳುತ್ತಿದೆ. ಭಾರಿವಾಹನಗಳ ಓಡಾಟದಿಂದ ಇನ್ನಷ್ಟು ದೂಳೆದ್ದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಶಕ್ತಿನಗರದ ಒಂದನೇ ಮತ್ತು ಎರಡನೇ ಕ್ರಾಸ್ ರಸ್ತೆಗಳಲ್ಲಿ ಶೇಖರಣೆ ಆಗಿರುವುದು ಸಾಮಾನ್ಯ ದೂಳಲ್ಲ. ಬೂದಿ ಮೆತ್ತಿಕೊಂಡು ರಸ್ತೆಗಳೆಲ್ಲ ಕೆಸರಾಗಿ ಸಣ್ಣ ಕಸಕಡ್ಡಿಗಳು ಸಹ ಅದರಲ್ಲಿ ಕೊಳೆತು ಬೆರತು ಹೋಗಿದೆ. ಇದೀಗ ಅದೇ ಕಸ ಒಣಗಿದ್ದು ಮೇಣದಂತಾಗಿದೆ.

ಭಾರಿವಾಹನಗಳು ಸಂಚರಿಸುತ್ತಲೇ ಗಟ್ಟಿಯಾದ ಬೂದಿಕಸ ಛಿದ್ರಗೊಂಡು ಮೇಲೆತ್ತರಕ್ಕೆ ಹಾರುತ್ತಿದೆ. ದಿನವಿಡೀ ಓಡಾಡುವ ಬೂದಿ ತುಂಬಿದ ವಾಹನಗಳಿಂದ ರಸ್ತೆಯ ಮೇಲೆ ಬೂದಿ ಬೀಳುತ್ತಲೇ ಇದೆ. ಬೂದಿ ತುಂಬಿದ ವಾಹನಗಳ ಮೇಲೆ ಭದ್ರವಾದ ತಾಡಪಲ್ ಹಾಕಿ ಕಟ್ಟಬೇಕು. ಬೂದಿ ಹಾರಿ ಹೋಗದಂತೆ ಎಚ್ಚರ ವಹಿಸಿ ಬೇರೆ ಕಡೆಗೆ ಸಾಗಬೇಕು. ಆದರೆ, ಇಲ್ಲಿ ಯಾವುದೂ ನಡೆಯುತ್ತಿಲ್ಲ.

ಭಾರಿ ವಾಹನಗಳು ಸಾಲು ಸಾಲಾಗಿ ಸಂಚರಿಸಿಗಾಗ ದೂಳು ದಟ್ಟ ಅಲೆಯಾಗಿ ಮೇಲೆದ್ದು ಸುತ್ತಮುತ್ತಲ ಪ್ರದೇಶದಲ್ಲಿ ಚದುರುತ್ತಿದೆ. ರಸ್ತೆ ಸಂಪೂರ್ಣ ದೂಳಾಗಿದೆ. ದೂಳಿನಲ್ಲಿ ರಸ್ತೆ ಹುಡುಕವಂಥ ಸ್ಥಿತಿ ನಿರ್ಮಾಣವಾಗಿದೆ.

ವಾಹನ ಸವಾರರು, ಆರ್‌ಟಿಪಿಎಸ್‌ ಸುತ್ತಮುತ್ತ ಇರುವ ಗ್ರಾಮಗಳ ಜನರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ರೈಸ್‌ ಮಿಲ್, ಎಪಿಎಂಸಿ ಹಾಗೂ ಕಚೇರಿ ಕೆಲಸಕ್ಕೆ ಬರುವ ಜನ ನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ. ದೂಳು ವಾಹನ ಸವಾರರ ಕಣ್ಣು, ಮೂಗು, ಕಿವಿಯೊಳಗೆ ಸೇರುತ್ತಿದೆ. ಗಂಟಲಿಗೆ ಇಳಿದು ಶ್ವಾಸಕೋಶಕ್ಕೂ ಹಾನಿ ಉಂಟು ಮಾಡುತ್ತಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಇದೆಲ್ಲ ಗೊತ್ತಿದ್ದರೂ ಲಾರಿ ಮಾಲೀಕರಿಂದ ಮಾಮೂಲು ಪಡೆದು ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲೆಯಲ್ಲಿ ಸರಿಯಾಗಿ ರಸ್ತೆ ಸುರಕ್ಷತಾ ಸಮಿತಿ ಸಭೆಗಳು ನಡೆಯುತ್ತಿಲ್ಲ. ಸಭೆಯ ದಿನಾಂಕ ನಿಗದಿಪಡಿಸಿ ಅಧಿಕಾರಿಗಳ ಸಹಿ ಮಾಡಿಸಿ ಇಟ್ಟುಕೊಳ್ಳುವುದಕ್ಕೆ ಸೀಮಿತವಾಗಿದೆ. ಸಭೆ ಇರುವುದನ್ನು ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳಿಗೂ ಗೊತ್ತು ಮಾಡುವುದಿಲ್ಲ. ಇದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡಿವೆ. ಸರ್ಕಾರ ಜನರ ಹಿತಕ್ಕಾಗಿ ರೂಪಿಸಿದ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಶಕ್ತಿನಗರದ ಕಾರ್ಮಿಕರು ಹಾಗೂ ರೈತರು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ.

ದೂಳಿನಿಂದಾಗಿ ಅನೇಕ ಜನರು ಅಸ್ತಮಾ, ಕಾಮಲೆ, ಕಣ್ಣಿನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಟಲು ಕೆರೆತದಂತಹ ಸಮಸ್ಯೆ ಹಲವರಲ್ಲಿ ಕಾಣಿಸಿಕೊಳ್ಳುತ್ತಲೇ ಇದೆ. ದೂಳಿನಿಂದಾಗಿ ರಿಮ್ಸ್‌ ಹಾಗೂ ಖಾಸಗಿ ಆಸ್ಪತ್ರೆಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ.

‘ಅಪಾರ ದೂಳಿನಿಂದಾಗಿ ಎದುರಿಗೆ ಬರುವ ವಾಹನಗಳು ಕಾಣುತ್ತಿಲ್ಲ. ಅಪಘಾತಗಳೂ ಸಂಭವಿಸುತ್ತಿವೆ. ಅಸುರಕ್ಷಿತವಾಗಿ ಲಾರಿಗಳನ್ನು ಹಾರುಬೂದಿ ಸಾಗಿಸುವ ಚಾಲಕರು ಹಾಗೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸುರಕ್ಷತೆ ಮರೆತ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಶಕ್ತಿನಗರ ಶೇಖರ ಶರ್ಮಾ ಒತ್ತಾಯಿಸಿದ್ದಾರೆ.

ಹಾರುಬೂದಿಯ ದೂಳುನಿಂದ ಶಕ್ತಿನಗರದ ಎರಡನೇ ಕ್ರಾಸ್ ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮಾಡುವ ವ್ಯಾಪರಸ್ಥರಿಗೆ ತೊಂದರೆಯಾಗುತ್ತಿದೆ. ದೂಳಿನಿಂದಾಗಿ ವ್ಯಾಪಾರ ಮಾಡಲು ಆಗುತ್ತಿಲ್ಲ. ಇಲ್ಲಿನ ಜನರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದ್ದ ಜಿಲ್ಲಾಡಳಿತ ನಿಯಮ ಉಲ್ಲಂಘಿಸುವ ಲಾರಿ ಮಾಲೀಕರ ಪರ ನಿಂತಿರುವುದು ಬೇಸರ ಉಂಟು ಮಾಡಿದೆ ಎಂದು ವ್ಯಾಪಾರಿ ಶೇಖರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ದೂಳು ವಾಹನ ಸವಾರರ ಕಣ್ಣು, ಮೂಗು, ಕಿವಿಯೊಳಗೆ ಸೇರುತ್ತಿದೆ. ಹಲವು ಮಾರಕ ರೋಗಕ್ಕೂ ಕಾರಣವಾಗುತ್ತಿದೆ. ಪ್ರಾದೇಶಿಕ ಸಾರಿಗೆ ಇಲಾಖೆ, ಪರಿಸರ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಇಲ್ಲಿ ಅನಿರೀಕ್ಷಿತ ಭೇಟಿಕೊಟ್ಟು ಸಮಸ್ಯೆ ನಿವಾರಿಸಬೇಕು. ಜನರು ಅನುಭವಿಸುತ್ತಿರುವ ನರಕಯಾತನೆ ತಪ್ಪಿಸಬೇಕು ಎಂದು ಮೆಡಿಕಲ್ ಶಾಪ್‌ ಮಾಲೀಕ ವೀರೇಶ ಮನವಿ ಮಾಡಿದ್ದಾರೆ.

ಆರ್‌ಟಿಪಿಎಸ್‌ ರಸ್ತೆಯಲ್ಲಿ ಭಾರಿವಾಹನದ ಅಪಾಯಕಾರಿ ಚಾಲನೆ
ಆರ್‌ಟಿಪಿಎಸ್‌ ರಸ್ತೆಯಲ್ಲಿ ಭಾರಿವಾಹನದ ಅಪಾಯಕಾರಿ ಚಾಲನೆ
ಶಕ್ತಿನಗರದ ಬಳಿ ರಸ್ತೆ ಕಾಣದಷ್ಟು ಎದ್ದಿರುವ ಹಾರುಬೂದಿ ದೂಳು
ಶಕ್ತಿನಗರದ ಬಳಿ ರಸ್ತೆ ಕಾಣದಷ್ಟು ಎದ್ದಿರುವ ಹಾರುಬೂದಿ ದೂಳು
ಶಕ್ತಿನಗರದ ಬಳಿ ದೂಳು ಎಬ್ಬಿಸುತ್ತ ಸಾಗಿರುವ ಹಾರುಬೂದಿ ಸಾಗಿಸುತ್ತಿರುವ ಲಾರಿಗಳು
ಶಕ್ತಿನಗರದ ಬಳಿ ದೂಳು ಎಬ್ಬಿಸುತ್ತ ಸಾಗಿರುವ ಹಾರುಬೂದಿ ಸಾಗಿಸುತ್ತಿರುವ ಲಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT