ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ

2020 ಸಾಲಿಗೆ ಗರಿಗೆದರಿದ ಹೊಸ ನಿರೀಕ್ಷೆಗಳು, ನಿರ್ಣಯಗಳು
Last Updated 31 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ರಾಯಚೂರು: ನೂತನ ವರ್ಷವನ್ನು ಸ್ವಾಗತಿಸುವುದು ಹಾಗೂ ಮುಗಿದು ಹೋಗುವ ವರ್ಷಕ್ಕೆ ವಿದಾಯ ಹೇಳುವ ಸಂಭ್ರಮ, ಸಡಗರ ಎಲ್ಲೆಡೆಯಲ್ಲೂ ಮಂಗಳವಾರ ತಡ ರಾತ್ರಿವರೆಗೂ ಮನೆಮಾಡಿತ್ತು.

ಡಿಸೆಂಬರ್ 31 ರ ಸೂರ್ಯಾಸ್ತ ಆಗುತ್ತಿದ್ದಂತೆ, ಬಡಾವಣೆಯ ಬೀದಿಗಳು ಹಾಗೂ ನಗರ, ಪಟ್ಟಣಗಳ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ವೇಗ ಹೆಚ್ಚಾಯಿತು. ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಹಾಜರಾಗಲು ಯುವಕರು ವೇಗದೊಂದಿಗೆ ಹೋಗುತ್ತಿದ್ದರು. ರಾತ್ರಿ ಆಗುತ್ತಿದ್ದಂತೆ ಸಂಭ್ರಮವು ಮತ್ತಷ್ಟು ಹೆಚ್ಚಾಯಿತು.

ಕೆಲವು ಯುವಕರು ಬೈಕ್‌ ಹಾಗೂ ಕಾರುಗಳ ಶಬ್ದ ಹೆಚ್ಚಿಸಿಕೊಂಡು ರಸ್ತೆಗಳಲ್ಲಿ ಸಂಭ್ರಮ ಪಟ್ಟರು. ಕೆಲವರು ರಸ್ತೆಗಳಲ್ಲಿಯೇ ‘ಹ್ಯಾಪಿ ನ್ಯೂ ಇಯರ್‌’ ಎಂದು ಬರೆಯುವ ಸಾಹಸದಲ್ಲಿ ತೊಡಗಿದ್ದರು. ಸ್ಟೇಷನ್‌ ರಸ್ತೆಯ ಹಾಸನ್‌ ಬೇಕರಿ, ಐಬಿ ಕಾಲೋನಿ ಪಕ್ಕದ ಕೇಕ್‌ ಕಾರ್ನರ್‌, ಆಶಾಪುರ ರಸ್ತೆಯ ಬೆಂಗಳೂರು ಬೇಕರಿ ಸೇರಿದಂತೆ ನಗರದ ಬೇಕರಿಗಳಲ್ಲಿ ಸಂಜೆಯಿಂದಲೇ ವೈವಿಧ್ಯಮಯ ಕೇಕ್‌ ಖರೀದಿಗೆ ಜನರು ಮುಗಿಬಿದ್ದಿದ್ದರು. ಸಿಹಿ ತಿನಿಸುಗಳಿಗೆ ವಿಶೇಷ ಬೇಡಿಕೆ ಇತ್ತು. ತಂಪು ಪಾನೀಯಗಳು ಕೂಡಾ ಯಥೇಚ್ಛವಾಗಿ ಮಾರಾಟವಾದವು.

ತಿನ್‌ ಕಂದಿಲ್‌, ಚಂದ್ರಮೌಳೇಶ್ವರ ಸರ್ಕಲ್‌, ನವೋದಯ ಕ್ಯಾಂಪಸ್‌ ಎದುರು, ಗಂಜ್‌ ಸರ್ಕಲ್‌, ಚಂದ್ರಬಂಡಾ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಯುವಕರು ತಂಡ ತಂಡವಾಗಿ ನಿಂತು ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಕೆಲವು ಬಡಾವಣೆಗಳಲ್ಲಿ ಕಡೆಗಳಲ್ಲಿ ಹಾಡು, ಸಂಗೀತ ಹಾಕಿಕೊಂಡು ಯುವಕರು, ಮಕ್ಕಳು ನೃತ್ಯ ಮಾಡಿದರು.

ಬಾರ್‌ ಮತ್ತು ರೆಸ್ಟೊರೆಂಟ್‌ ಭರ್ತಿ

ನಗರದ ಎಲ್ಲ ಬಾರ್‌ ಹಾಗೂ ರೆಸ್ಟೊರೆಂಟ್‌ಗಳು ಮದ್ಯಪ್ರಿಯರಿಂದ ಭರ್ತಿಯಾಗಿದ್ದವು. ರೈಲ್ವೆ ನಿಲ್ದಾಣ ಪಕ್ಕದ ಎಂಎಸ್‌ಐಎಲ್‌ ಮಳಿಗೆಯಲ್ಲಿ ಮದ್ಯ ಖರೀದಿಗಾಗಿ ಸಂಜೆಯಿಂದಲೇ ಜನರು ಮುಗಿಬಿದ್ದಿದ್ದರು. ಚಿಕನ್‌ ಹಾಗೂ ಮಟನ್‌ ಖರೀದಿ ಭರಾಟೆಯೂ ಜೋರಾಗಿತ್ತು.

ಬಡಾವಣೆಗಳಲ್ಲಿ ಜನರು ಎಂದಿನಂತೆ ಬೇಗನೆ ನಿದ್ರಿಸದೆ, ತಡರಾತ್ರಿವರೆಗೂ ಕಾದಿದ್ದರು. ವಸತಿ ಸಮುಚ್ಛಯಗಳಿರುವ ಕಡೆಗಳಲ್ಲಿ ಮಧ್ಯರಾತ್ರಿ ಪಟಾಕಿ ಸಿಡಿಸಿ, ಸಿಹಿ ಹಂಚುವ ತಯಾರಿ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT