ಗುರುವಾರ , ಆಗಸ್ಟ್ 5, 2021
23 °C
ಸೋಮವಾರಪೇಟೆ ಮಠದ ವೀರರಾಚೋಟಿ ಸ್ವಾಮಿ ಹೇಳಿಕೆ

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಯಚೂರಿನ ಸೋಮವಾರಪೇಟೆ ಮಠದ ವೀರರಾಚೋಟಿ ಸ್ವಾಮಿ ಹೇಳಿದರು.

ನಗರದ ಗ್ರೀನ್ ಹೀಲ್ಸ್, ಪವನ್ ಲೇಔಟ್ ವಾರ್ಡ್‌ ಸಂಖ್ಯೆ 2 ರಲ್ಲಿ ಅರಣ್ಯ ಇಲಾಖೆ, ನಗರಸಭೆ ಹಾಗೂ ಹಸಿರು ಬಳಗದಿಂದ ಸೋಮವಾರದಿಂದ ಆರಂಭಿಸಿದ ‘ನಮ್ಮಗಿಡ–ನಮ್ಮ ಉಸಿರು’ ಸಸಿನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಂದಿಗ್ಧ ಪರಿಸ್ಥಿತಿಯಲ್ಲಿ ನಾವುಗಳು ಪರಿಸರವನ್ನು ಬೆಳೆಸಿ ಉತ್ತಮ ವಾತಾವರಣ ನಿರ್ಮಿಸಬೇಕಿದೆ. ಜನರನ್ನು ಜಾಗೃತಗೊಳಿಸಿ ಸಮುದಾಯದ ಸಹಭಾಗಿತ್ವದಲ್ಲಿ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳೊಣ’ ಎಂದರು.

ನಗರಸಭೆ ಸದಸ್ಯ ಜಯಣ್ಣ ಮಾತನಾಡಿ, ಸಸಿನೆಡುವ ಮೂಲಕ ಪರಿಸರವನ್ನು ಪೋಷಣೆ ಮಾಡುವುದಲ್ಲದೆ ಅದರ ಬೆಳವಣಿಗೆಗೆ ಪರಿಶ್ರಮ ವಹಿಸಬೇಕಾಗಿದೆ. ಈ ದಿನ ನಗರದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹನೀಯರನ್ನು ಆಹ್ವಾನಿಸಿ ಅವರಿಂದ ತಲಾ ಒಂದು ಸಸಿ ನೆಡಸಿ ಆ ಸಸಿಗಳಿಗೆ ಅವರ ಗುರುತಿನ ಚೀಟಿಯನ್ನು ಅಂಟಿಸಿ ಅವರುಗಳ ಹೆಸರಿನಲ್ಲಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯ ಇದಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ಕೆ ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ, ನಗರಸಭೆ ಸಿಬ್ಬಂದಿ ಹಾಗೂ ಹಸಿರು ಬಳಗದ ಪದಾಧಿಕಾರಿಗಳು ಕೈಜೋಡಿಸಿರುವುದು ಇನ್ನೂ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.

ಕ್ರೈಸ್ತ ಧರ್ಮಗುರು ರೆವರೆಂಡ್ ಸುಮಿತ್ರಾ ಪಾಸ್ಟರ್ ಮಾತನಾಡಿ, ಹಲವು ವರ್ಷಗಳಿಂದ ವಿವಿಧ ಸರ್ಕಾರ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿವೆ. ಅದರಂತೆ ಜಯಣ್ಣ ಅವರು ನಗರಸಭೆ ಉಪಾಧ್ಯಕ್ಷರಾಗಿದ್ದ ಸಂದರ್ಭದಿಂದ ಪರಿಸರಕ್ಕೆ ಸಂರಕ್ಷಣೆಗೆ ಮೊದಲ ಆದ್ಯತೆಯಲ್ಲಿ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಮುಸ್ಲಿಂ ಧರ್ಮಗುರುಗಳಾದ ಹಫಿಜ್ ಮಹಮ್ಮದ್ ಇಬ್ರಾಹಿಂ ಮಾತನಾಡಿ, ‘ಹಸಿರೇ ಉಸಿರು ಎನ್ನುವ ಘೋಷವಾಕ್ಯದಂತೆ ನಾವೆಲ್ಲರೂ ಈ ಸಸಿಗಳನ್ನು ನೆಡುವ ಮುಖಾಂತರ ಜಯಣ್ಣ ಅವರ ಕಾರ್ಯಕ್ಕೆ ಶಕ್ತಿ ಆಗೋಣ. ಮುಂದಿನ ದಿನಗಳಲ್ಲಿ ಸಸಿಗಳು ಹೆಮ್ಮರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಲು ಶ್ರಮವಹಿಸೋಣ’ ಎಂದರು.

ಅನೂಕ್ ಪಾಸ್ಟರ್, ಪೊಲೀಸ್‌ ಇನ್‌ಸ್ಪೆಕ್ಟರ್‌ ಶಫಿಯುದ್ದಿನ್‌,ಅರಣ್ಯ ಇಲಾಖೆಯ ರಾಜೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.