ಮಸ್ಕಿ: ಜೂಜಾಟ ನಡೆಯುತ್ತಿದ್ದರೂ ಮಾಹಿತಿ ನೀಡದೇ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಸ್ಕಿ ಪೊಲೀಸ್ ಠಾಣೆಯ ಮೂವರು ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅಮಾನತು ಮಾಡಿದ್ದಾರೆ.
ಹೆಡ್ ಕಾನ್‌ಸ್ಟೆಬಲ್ ಈರಣ್ಣ, ಕಾನ್‌ಸ್ಟೆಬಲ್‌ಗಳಾದ ವೀರಭದ್ರಗೌಡ, ಖಾಜಾ ಹುಸೇನ್ ಅಮಾನತಾದವರು. ಹಡಗಲಿ ಗ್ರಾಮದಲ್ಲಿ ಜೂಜಾಟ ನಡೆಯುತ್ತಿದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದಿರುವುದು ಹಾಗೂ ದಾಳಿ ನಡೆಸದಿರುವ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಈಚೆಗೆ ಹಡಗಲಿ ಗ್ರಾಮದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಜಿಲ್ಲಾ ಪೊಲೀಸರ ವಿಶೇಷ ತಂಡ ದಾಳಿ ನಡೆಸಿ 52 ಬೈಕ್ ಹಾಗೂ ₹2.02 ಲಕ್ಷ ನಗದು ವಶ ಪಡಿಸಿಕೊಂಡಿತ್ತು. ಈ ಬಗ್ಗೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.