ಬುಧವಾರ, ಜನವರಿ 22, 2020
28 °C
ರಾಯಚೂರು ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ

ಹೆಚ್ಚಿದ ಜನಸಂಖ್ಯೆ; ತಗ್ಗಿದ ಸೌಕರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಮೂಲ ಸೌಕರ್ಯಗಳು ಮತ್ತಷ್ಟು ಹಾಳಾಗುತ್ತಿವೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಕಾರ್ಯವನ್ನು ಜನಪ್ರತಿನಿಧಿಗಳು ಮಾಡುತ್ತಿಲ್ಲ. ಇದರಿಂದ ನಗರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ರಾಯಚೂರು ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಸೋಮವಾರ ಧರಣಿ ನಡೆಸಿದರು.

ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯ ಹೆಚ್ಚಿಸಬೇಕಾದ ನಗರಸಭೆ ನಿರ್ಲಕ್ಷ್ಯವಹಿಸುತ್ತಿದೆ. ನಗರದಲ್ಲಿ ಅನೇಕ ರಸ್ತೆಗಳು ಹದಗೆಟ್ಟಿದ್ದು, ನಿರ್ವಹಣೆಯಿಲ್ಲದೆ ಬೀದಿದೀಪಗಳು ಕೂಡಾ ಹಾಳಾಗುತ್ತಿವೆ. ಇದರಿಂದ ಜನರು ಪರತಪಿಸುವಂತಾಗಿದೆ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಟಿಪ್ಪು ಸುಲ್ತಾನ ರಸ್ತೆ, ಅಶೋಕ ಡಿಪೋ ರಸ್ತೆ, ಕೇಂದ್ರಿಯ ವಿದ್ಯಾಲಯ ರಸ್ತೆ, ವಾಸವಿ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿವೆ. ನಿತ್ಯವೂ ವಾಹನ ಸವಾರರು ಪರದಾಡುತ್ತಿದ್ದಾರೆ. ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಘನತ್ಯಾಜ್ಯ ವಸ್ತು ವಿಲೇವಾರಿ ಅವೈಜ್ಞಾನಿಕವಾಗಿದ್ದು, ತ್ಯಾಜ್ಯ ಸಂಗ್ರಹ ವ್ಯವಸ್ಥೆ ಮಾಡಲಾಗಿದ್ದರೂ ಎಲ್ಲೆಂದರಲ್ಲಿ ಕಸ ಎಸೆಯುವುದು ನಡೆಯುತ್ತಲೇ ಇದೆ. ರಸ್ತೆಗಳು ಧೂಳುಮಯವಾಗಿವೆ. ಚರಂಡಿ ಸ್ವಚ್ಚತೆ ನಿರ್ವಹಣೆಯಾಗುತ್ತಿಲ್ಲ ಎಂದು ಆರೋಪಿಸಿದರು.

ನಗರಸಭೆಯ ನಿರ್ಲಕ್ಷ್ಯದಿಂದ 24 ಗಂಟೆ ಕುಡಿಯುವ ನೀರು ಯೋಜನೆ ಐದು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದೆ. ಕುಡಿಯುವ ನೀರು, ಒಳಚರಂಡಿ ಯೋಜನೆಗಳಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದರೂ ಮರು ನಿರ್ಮಾಣ ವ್ಯವಸ್ಥಿತವಾಗಿ ನಡೆಯುತ್ತಿಲ್ಲ ಎಂದು ದೂರಿದರು.

ನಗರದ ಜನರಿಗೆ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದ್ದರೂ ಸರಿಪಡಿಸುವ ಪ್ರಯತ್ನವೇ ನಡೆದಿಲ್ಲ. ನಗರದ ನಾಗರೀಕರು ಎದುರಿಸುತ್ತಿರುವ ಸಮ್ಯೆಗಳಿಗೆ 15 ದಿನಗಳಲ್ಲಿ ಪರಿಹಾರ ಒದಗಿಸದೇ ಇದ್ದರೆ ನಗರ ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.

ಧರಣಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ಡಾ.ರಜಾಕ್ ಉಸ್ತಾದ್‌, ಕೆ.ಇ.ಕುಮಾರ, ಶಿವುಕುಮಾರ ಯಾದವ, ಎನ್.ಮಹಾವೀರ, ವೀರೇಶ ಹೀರಾ,ಮೊಹ್ಮದ ರಫೀಕ್, ಎಸ್.ಮಲ್ಲೇಶ ಇದ್ದರು.

ಪ್ರತಿಕ್ರಿಯಿಸಿ (+)