ಸೋಮವಾರ, ಡಿಸೆಂಬರ್ 5, 2022
19 °C

ಶಿವನಗೌಡ ವಿರುದ್ಧ ದೂರು ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಜೆಡಿಎಸ್ ಮುಖಂಡರಾದ ಕರೆಮ್ಮ ನಾಯಕ ಹಾಗೂ ಅವರ ಪುತ್ರಿಯ ಮೇಲೆ ಬಿಜೆಪಿ ಮುಖಂಡರು ಹಾಗೂ ಶಾಸಕ ಶಿವನಗೌಡ ನಾಯಕ ಅವರ ಬೆಂಬಲಿಗರು ದೌರ್ಜನ್ಯ ನಡೆಸಿ, ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸದೇ ಶಾಸಕ ಶಿವನಗೌಡ ನಾಯಕರ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿರೂಪಾಕ್ಷಿ ಅವರು ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈಚೆಗೆ ಕರೆಮ್ಮ ನಾಯಕ ಬಂಜಾರ ಸಮಾವೇಶ ಮಾಡಿ ದ್ಯಾಮ್ಲೆ ನಾಯ್ಕ್ ತಾಂಡಾದ ದೇವಸ್ಥಾನ್ಕಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಶಿವನಗೌಡ ನಾಯಕರ ಬೆಂಬಲಿಗರು ಕಾರಿನ ಮೇಲೆ ಜೆಡಿಎಸ್ ಬಾವುಟ ಇರುವುದನ್ನು ತೆರವುಗೊಳಿಸಲು ಒತ್ತಾಯಿಸಿದ್ದಾರೆ. ನಿರಾಕರಿಸಿದಾಗ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕರೆಮ್ಮ ನಾಯಕ ಹಾಗೂ ಅವರ ಪುತ್ರಿ ಗೌತಮಿಯನ್ನು ಎಳೆದಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಇದು ಶಿವನಗೌಡ ನಾಯಕರ ಕುಮ್ಮಕ್ಕಿನಿಂದ ಆದ ಕೆಲಸ’ ಎಂದು ದೂರಿದರು.

ಪೊಲೀಸರಿಗೆ ದೂರು ನೀಡಿದರೂ ಕೆಲವರ ವಿರುದ್ಧ ತಡವಾಗಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ಶಾಸಕರ ಮನೆಯಲ್ಲಿಯೇ ಆಶ್ರಯ ಪಡೆದಿದ್ದು, ಬಂಧಿಸಿ ಕ್ರಮ ಕೈಗೊಳ್ಳುತ್ತಿಲ್ಲ. ದೇವದುರ್ಗ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಮರಳು ಅಕ್ರಮ ಗಣಿಗಾರಿಕೆ, ಇಸ್ಪೀಟ್‌, ಜೂಜಾಟ, ಮಟ್ಕಾ ಚೀಟಿ, ಮದ್ಯ ಅಕ್ರಮ ಮಾರಾಟ ಸೇರಿ ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚಾಗಿವೆ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದರು.

ದೇವದುರ್ಗದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಶಾಸಕರ ವಿರುದ್ಧ ‍ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.

ದೇವದುರ್ಗದಲ್ಲಿ ಪ್ರಜಾಪ್ರಭುತ್ವ ಉಳಿಸಲು ನವೆಂಬರ್ 4ರಂದು ಸಮಾವೇಶ ಮಾಡಲಾಗುವುದು. ಶಾಸಕರ ಭ್ರಷ್ಟಾಚಾರ ದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಜೆಡಿಎಸ್‌ ದೇವದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಬುಡ್ಡನಗೌಡ, ಖಾಜನಗೌಡ, ಯುಸೂಫ್ ಖಾನ್ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು