ಗುರುವಾರ , ಡಿಸೆಂಬರ್ 3, 2020
19 °C
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ್‌ ಸೂಚನೆ

ಶಿಶುಗೃಹ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ, ಬಾಲಾಪರಾಧಗಳ ತಡೆಗೆ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಅನಾಥ ಮಕ್ಕಳ ಆರೈಕೆಗಾಗಿ ಶಿಶುಗೃಹ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಸಕ್ತ ಸಾಲಿನ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅನಾಥ ಮಕ್ಕಳ ಪಾಲನೆಗಾಗಿ ಕೈಗೊಂಡ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಬೀದಿ ಬದಿ ಎಸೆದ ಅನಾಥ ನವಜಾತ ಶಿಶುಗಳ ರಕ್ಷಣೆ ಕಾರ್ಯ ಸರಿಯಾಗಿ ನಡೆಯಬೇಕು. ಹಲವೆಡೆ ಅನಾಥ ನವಜಾತ ಶಿಶುಗಳ ರಕ್ಷಣೆಯಿಲ್ಲದೇ ನಾಯಿಗಳಿಗೆ ತುತ್ತಾಗುತ್ತವೆ. ಇದಕ್ಕಾಗಿ ಶಿಶುಗೃಹಗಳ ಅವಶ್ಯವಾಗಿದೆ. 0–6 ವರ್ಷದೊಳಗಿನ ಮಕ್ಕಳಿಗೆ ಶಿಶುಗೃಹದಲ್ಲಿ ಆರೈಕೆ ಮಾಡಲು ಅನುಕೂಲ ಆಗಲಿದೆ. ಇದಕ್ಕೆ ಪ್ರಸ್ತಾವ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಬಾಲಕಿಯರ, ಬಾಲಕರ ಬಾಲ ಮಂದಿರದಲ್ಲಿ ಮಕ್ಕಳ ಆರೈಕೆ ಚೆನ್ನಾಗಿ ಮಾಡಬೇಕು. ನಿಯಮನುಸಾರ ಅವರಿಗೆ ಸಿಗುವ ಸೌಲಭ್ಯ ಒದಗಿಸಬೇಕು. ಹಲವು ವಸತಿ ನಿಲಯ ಹಾಗೂ ರಕ್ಷಣಾ ಕೇಂದ್ರಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಸಿಬ್ಬಂದಿ ಹಾಗೂ ಇತರರಿಂದ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವ ಘಟನೆ ನಡೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ರಕ್ಷಣೆ ಮಾಡಬೇಕು ಎಂದರು.

ರಕ್ಷಣೆಯಲ್ಲಿ ಏನಾದರೂ ಲೋಪದೊಷವಾಗಿದ್ದಲ್ಲಿ ಇಲಾಖೆಯ ಅಧಿಕಾರಿಗಳ ಹಾಗೂ ತಹಶೀಲ್ದಾರರನ್ನು ಹೊಣೆಗಾರರನ್ನಾಗಿ ಮಾಡುವ ನೂತನ ನಿಯಮ ರೂಪಿಸಿದ್ದು ಶಿಕ್ಷೆಗೆ ಗುರಿಯಾಗುವ ಸಂಭವವಿರುತ್ತದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಂಜುಳಾ ಹೆಗ್ಡೆ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಮನ್ಸೂರ್ ಅಲಿಖಾನ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕ ಇತರೆ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಅನೇಕ ಕಾರ್ಯಕ್ರಮ ಆಯೋಜಿಸಿ ನಿಯಂತ್ರಿಸಲಾಗಿದೆ. ದೂರುಗಳಿಗೆ ಸ್ಪಂದಿಸಿ ಪ್ರಕರಣ ದಾಖಲಿಸಿ ಫಾಲೋಅಪ್ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ 11 ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆ ಎಂದು ಪ್ರಗತಿಯ ಕುರಿತು ಸಭೆಗೆ ಮಾಹಿತಿ ನೀಡಿದರು.

ಎಚ್‌ಐವಿ ಪೀಡಿತ, ಕುಷ್ಠರೋಗಿ, ಜೈಲು ವಾಸಿಗಳ ಮಕ್ಕಳ ಶಿಕ್ಷಣ ಪಡೆಯಲು ಸರ್ಕಾರವು ಅನುದಾನ ನೀಡಲಾಗುತ್ತಿದೆ. ಇಂತಹ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲ ಮಾಡಬೇಕು. ಇದುವರೆಗೆ ಕೇವಲ 86 ಮಕ್ಕಳನ್ನು ಗುರುತಿಸಿರುವುದು ನೋಡಿದರೆ ಚುರುಕಾದ ಕೆಲಸ ಆಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಅವರು ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಇಂತಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಆಸಕ್ತಿವಹಿಸಬೇಕು ಎಂದು ಅವರು ಹೇಳಿದರು.

ಪರಿಶಿಷ್ಟ ಜಾತಿ 39, ಪರಿಶಿಷ್ಟ ಪಂಗಡ 11 ಹಾಗೂ ಇತರರು 36 ಸೇರಿ ಒಟ್ಟು 86 ಮಕ್ಕಳಿಗೆ ಪ್ರತಿ ತಿಂಗಳಿಗೆ ತಲಾ ₹1,000 ಸಾವಿರದಂತೆ ಮೂರು ವರ್ಷಗಳ ಅವಧಿವರೆಗೆ ನೀಡಲಾಗುತ್ತದೆ. ಅಲ್ಲದೇ ಎಚ್‌ಐವಿ ಪೀಡಿತ ಮಕ್ಕಳಿಗೆ 18 ವರ್ಷದವರೆಗೆ ಪ್ರತಿ ತಿಂಗಳು ತಲಾ ₹ 1, 000 ನೀಡಲಾಗುತ್ತದೆ.

ಜಿಲ್ಲೆಯಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಆಯಾ ಇಲಾಖೆಯವರು ತೀವ್ರ ನಿಗಾ ವಹಿಸಬೇಕು. ಬೋರ್ಡ್‌ಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.