ದೇವದುರ್ಗ: ಪಟ್ಟಣದ ವಿವಿಧಡೆ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡೆದು ಚಿಗುರುತ್ತಿದ್ದು, ಬಿಡಾಡಿ ದನಗಳು, ಎಮ್ಮೆ ಮತ್ತು ಕುದುರೆಗಳು ಹೊಲಕ್ಕೆ ನುಗ್ಗಿ ಅದನ್ನು ನಾಶ ಪಡಿಸುತ್ತಿವೆ. ಅಂಥ ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ಹಾಗೂ ರೈತರು ಗುರುವಾರ ಪುರಸಭೆ ಮುಖ್ಯಾಧಿಕಾರಿ ದುರಗಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಮರಿಲಿಂಗ ಪಾಟೀಲ ಮಾತನಾಡಿ, ‘ಈಗಾಗಲೇ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವಾರ ಸುರಿದ ಮಳೆಗೆ ಹತ್ತಿ ಬೀಜ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಅವು ಮೊಳಕೆ ಹೊಡೆದಿವೆ. ಇದೀಗ ಅವುಗಳಿಗೆ ಬೀಡಾಡಿ ದನಗಳ ಕಾಟ ಶುರುವಾಗಿದ್ದು, ರೈತರಿಗೆ ನಷ್ಟವಾಗುತ್ತಿದೆ. ಜಾನುವಾರಗಳನ್ನು ವಶಕ್ಕೆ ಪಡೆದು ಗೋಶಾಲೆ ಅಥವಾ ಕೋಂಗಡಿ ಕೊಠಡಿಯಲ್ಲಿ ಕೂಡಿಹಾಕಿ ದನಗಳ ಮಾಲೀಕರಿಗೆ ದಂಡ ಹಾಕಬೇಕು. ನಷ್ಟವಾದ ರೈತರಿಗೆ ಪರಿಹಾರ ನೀಡಬೇಕು. ಬೇಸಿಗೆ ಮುಗಿದು ಎರಡು ತಿಂಗಳಾದರೂ ಜಾನುವಾರಗಳನ್ನು ಹಾಗೆ ಬಿಡುತ್ತಿರುವುದು ಸರಿಯಲ್ಲ. ಸಾಕಷ್ಟು ಹಣ ವೆಚ್ಚ ಮಾಡಿ ಬಿತ್ತನೆ ಮಾಡಿದ್ದು ದನಗಳ ಹಾವಳಿಯಿಂದ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಬಾವಸಲಿ ಗೌರಂಪೇಟ, ಅಲಿಸಾಬ್ ಬುವಾಜಿ ಗೌರಂಪೇಟ, ರಮೇಶ, ಇಮಾಮಸಾಬ್, ಇಬ್ರಾಹಿಂ ಬಾಷಾಸಾಬ್, ಅಬ್ದುಲ್ ಸಾಬ್, ಬಸವ ತಾತ ಮತ್ತು ಅಲ್ಲಾವುದ್ದೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.