ಭಾನುವಾರ, ಆಗಸ್ಟ್ 18, 2019
22 °C

ಗ್ರಾಪಂ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ 20ರಿಂದ

Published:
Updated:
Prajavani

ರಾಯಚೂರು: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಅನುಮೋದನೆ, ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆಗಸ್ಟ್ 20ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜಮೆಂಟ್ ಸಿಸ್ಟಮ್‌ಗೆ ನೌಕರರ ಮಾಹಿತಿ ಅಳವಡಿಸಿದರೆ ರಾಜ್ಯ ಸರ್ಕಾರದಿಂದ ವೇತನ ನೀಡಲಾಗುತ್ತದೆ. ಆದರೆ, ಇನ್ನೂ 17 ಸಾವಿರ ನೌಕರರ ಮಾಹಿತಿ ಅಳವಡಿಸುವುದು ರಾಜ್ಯದಲ್ಲಿ ಬಾಕಿಯಿದೆ. ಈ ಕಾರಣಕ್ಕೆ ವೇತನ ತೊಂದರೆ ಅನುಭವಿಸುತ್ತಿದ್ದು, ಜಿಲ್ಲೆಯಲ್ಲಿ 1,300 ನೌಕರರಿಗೆ ಒಂದು ವರ್ಷದಿಂದ ವೇತನ ನೀಡಿಲ್ಲ ಎಂದು ಆರೋಪಿಸಿದರು.

ಪಂಚಾಯಿತಿ ನಿರ್ಣಯ, ಹಾಜರಾತಿ ಹಾಗೂ ವಯಸ್ಸಿನ ದಾಖಲೆ ಪಡೆದುಕೊಂಡು ನೌಕರರ ಅನುಮೋದನೆ ನೀಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸರ್ಕಾರ ಆದೇಶ ನೀಡಿದೆ. ಇದರಿಂದ ಪಂಪ್ ಆಪರೇಟರ್, ಬಿಲ್ ಕಲೆಕ್ಟರ್ ಹಾಗೂ ಕಸಗೂಡಿಸುವ ನೌಕರರು ಸೇರಿದಂತೆ ಒಟ್ಟು 25 ಸಾವಿರ ನೌಕರರು ಕಾಯಂಗೊಳ್ಳಲಿದ್ದಾರೆ. ಸುಮಾರು ವರ್ಷಗಳಿಂದ ಹೋರಾಟ ಮಾಡಲು ಲಾಠಿ ಏಟು ಕೂಡ ತಿಂದು, ಕೊನೆಗೂ ಹೋರಾಟಕ್ಕೆ ಜಯ ದೊರೆತಿದೆ ಎಂದರು.

ರಾಜ್ಯದಲ್ಲಿ ಇನ್ನೂ 8 ಸಾವಿರ ನೌಕರರ ಅನುಮೋದನೆ ಬಾಕಿ ಉಳಿಯಲಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 30 ಸಾವಿರ ನೌಕರರ ಅನುಮೋದನೆ ಮಾಡಲಾಗಿತ್ತು. ಆದ್ದರಿಂದ ಕಸಗೂಡಿಸುವ ನೌಕರರಿಗೆ ಕನಿಷ್ಠ ವಿದ್ಯಾರ್ಹತೆಯ ಷರತ್ತು ತೆಗೆಯಬೇಕು ಎಂದು ಆಗ್ರಹಿಸಿದರು.

ಬಿಲ್ ಕಲೆಕ್ಟರ್‌ಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಜಿಲ್ಲೆಯಲ್ಲಿ 2012ರಿಂದ ನಡೆದಿಲ್ಲ. ಈಗಲಾದರೂ ಬಡ್ತಿ ನೀಡುವ ಕೆಲಸ ಆರಂಭಿಸಬೇಕು. ನೌಕರರ ವೇತನಕ್ಕೆ ₹830 ಕೋಟಿ ಅನುದಾನ ಅಗತ್ಯವಿದ್ದು, ₹ 518 ಕೋಟಿ ನೀಡಲಾಗಿದೆ. ಇನ್ನುಳಿದ ಹಣವನ್ನು ಬಿಡುಗಡೆ ಮಾಡಿ ಅನುಕೂಲ ಮಾಡಬೇಕು. ಕೆಲಸ ಮಾಡುವ ನೌಕರರಿಗೆ ಕನಿಷ್ಠ ವೇತನ ದೊರಕಿಸಲು ಜಿಲ್ಲಾ ಪಂಚಾಯಿತಿ ವಿಳಂಬ ಮಾಡಬಾರದು ಎಂದರು.

ಜಿಲ್ಲಾ ಅಧ್ಯಕ್ಷ ಅಮರೇಶ, ಡಿ.ಎಸ್.ಶರಣಬಸವ, ಮಹಾದೇವಪ್ಪ, ನಿತ್ಯಾನಂದ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post Comments (+)