ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೋಳ ಖರೀದಿ ಹಣ ಪಾವತಿಗೆ ಒತ್ತಾಯ; ಮಿನಿವಿಧಾನಸೌಧ ಎದುರು ರೈತ ಸಂಘದಿಂದ ಪ್ರತಿಭಟನೆ

Published : 6 ಆಗಸ್ಟ್ 2024, 12:36 IST
Last Updated : 6 ಆಗಸ್ಟ್ 2024, 12:36 IST
ಫಾಲೋ ಮಾಡಿ
Comments

ಸಿಂಧನೂರು: ತಾಲ್ಲೂಕಿನ ಅಲಬನೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಖರೀದಿ ಕೇಂದ್ರದಲ್ಲಿ ಜೋಳ ಖರೀದಿ ಮಾಡಿದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಪಾವತಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಮಂಗಳವಾರ ನಗರದ ಮಿನಿವಿಧಾನಸೌಧ ಕಚೇರಿಯ ಎದುರು ಪ್ರತಿಭಟನೆ ನಡೆಸಿತು.

ಜೋಳದ ಮಾರುಕಟ್ಟೆ ಕುಸಿದು ಬಿದ್ದ ಕಾರಣ ಅಲಬನೂರು ವ್ಯವಸಾಯ ಸೇವಾ ಸಹಕಾರ ಸಂಘದ ಖರೀದಿ ಕೇಂದ್ರದ ಮೊರೆ ಹೋಗಿ ರೈತರು ಜೋಳ ಮಾರಾಟ ಮಾಡಿದ್ದಾರೆ. ಆದರೆ ನಾಲ್ಕು ತಿಂಗಳು ಗತಿಸಿದರೂ ರೈತರಿಗೆ ಹಣ ಪಾವತಿಯಾಗಿಲ್ಲ. ಕಳೆದ ವರ್ಷ ಬರಗಾಲದಿಂದ ಅಲ್ಪಸ್ವಲ್ಪ ಬೆಳೆ ಬಂದರೂ ಸಹ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗದೆ ರೈತರು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದು, ಇನ್ನೂ ಹಣ ಜಮಾ ಆಗದೆ ಕಂಗಾಲಾಗಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ವಿವರಿಸಿದರು.

ಒಂದು ವಾರದಲ್ಲಿ ರೈತರ ಖಾತೆಗೆ ಜೋಳ ಖರೀದಿ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ಮಿನಿವಿಧಾನಸೌಧ ಎದುರು ಧರಣಿ ಕೂಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ‘ಈಗಾಗಲೇ ₹365 ಕೋಟಿ ಜೋಳ ಖರೀದಿ ಹಣ ರೈತರಿಗೆ ಪಾವತಿಸಲಾಗಿದೆ. ಇನ್ನೂ ₹65 ಕೋಟಿ ಎನ್‍ಐಸಿ ಸಾಫ್ಟ್‌ವೇರ್ ಅಪ್‍ಡೇಟ್‍ನಿಂದ ಜಮಾ ಆಗುವಲ್ಲಿ ವಿಳಂಬವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವ್ಯವಸ್ಥಾಪಕರ ಗಮನಕ್ಕೆ ತಂದು ಶೀಘ್ರ ಜಮಾ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಯ್ಯ ಜವಳಗೇರಾ, ಮುಖಂಡರಾದ ವೆಂಕಟೇಶ ಕೋಠಾ, ರಮೇಶ ಮುಕ್ಕುಂದಾ, ಹನುಮಂತ ಬೂದಿವಾಳ, ನಾಗಪ್ಪ ಬೂದಿವಾಳ, ಪಾರಯ್ಯಸ್ವಾಮಿ ಹಾಗೂ ಅಲಬನೂರು ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT