ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ,ಪ್ರತಿಭಟನೆ

ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ
Published 20 ಮೇ 2024, 14:14 IST
Last Updated 20 ಮೇ 2024, 14:14 IST
ಅಕ್ಷರ ಗಾತ್ರ

ರಾಯಚೂರು: ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು. ರೈತರ ಪರಿಹಾರದ ಹಣವನ್ನು ಸಾಲಕ್ಕೆ ಮರುಪಾವತಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

‘ರೈತರು ಹಾಗೂ ಕೃಷಿ ಕಾರ್ಮಿಕರು ತೀವ್ರ ಬರದಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಿ ಪರಿಹಾರ ನೀಡಬೇಕು. ಈಗಾಗಲೇ ಸರ್ಕಾರ ₹2000 ಬೆಳೆ ಹಾನಿ ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಹಾಕಿದ್ದು, ಇನ್ನು ಶೇ 50ರಷ್ಟು ರೈತರಿಗೆ ಹಣ ಜಮೆಯಾಗಿಲ್ಲ. ಅನೇಕರಿಗೆ ಹಣ ಜಮೆ ಆದರೂ ಬ್ಯಾಂಕ್ ಅಧಿಕಾರಿಗಳು ಸಾಲದ ಮರುಪಾವತಿಯ ಕಂತುಗಳ ಹಣ ಕಡಿತಗೊಳಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಕಳೆದ ವರ್ಷವೂ ಬರಗಾಲವಿದ್ದ ಕಾರಣ ಜಾನುವಾರುಗಳಿಗೆ ಮೇವು ಖರೀದಿಸಲು ಆಗಿರಲಿಲ್ಲ. ಮೇವಿನ ಕೊರತೆ ಹಿನ್ನೆಲೆಯಲ್ಲಿ ಮೇವಿನ ದರ ಏರಿಕೆಯಾಗಿದೆ. ಕೃಷಿ ಚಟುವಟಿಕೆ ನಡೆಯದ ಕಾರಣ ಕೃಷಿ ಕಾರ್ಮಿಕರಿಗೆ ಆರ್ಥಿಕ ಸಮಸ್ಯೆಯಾಗಿದೆ. ಉದ್ಯೋಗವಿಲ್ಲದೇ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ನರೇಗಾ ಕಾರ್ಮಿಕರಿಗೂ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲ’ ಎಂದು ಆರೋಪಿಸಿದರು.

‘ತೋಟಗಾರಿಕೆ ಬೆಳೆ ಬೆಳೆದ ರೈತರು ನೀರಿಲ್ಲದೇ ಟ್ಯಾಂಕರ್ ಮೂಲಕ ನೀರು ಹರಿಸಿದ್ದಾರೆ. ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳು ಮನ ಬಂದಂತೆ ದರ ನಿಗದಿ ಮಾಡಿದ್ದಾರೆ ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈಕ್ರೋ ಫೈನಾನ್ಸ್ ಕಂಪನಿಗಳು ರೈತ, ಕೃಷಿ ಕಾರ್ಮಿಕ ಮಹಿಳೆಯರಿಂದ ಸಾಲ ವಸೂಲಾತಿಗೆ ಮುಂದಾಗಿದ್ದು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಹುಲಿಗೆಪ್ಪ, ಆದೆಪ್ಪ, ಅಮರೇಶ, ರಿಯಾಜ್, ಮಂಜುನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT