ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಪುಟ್ಟರಾಜರ ಸಮಕಾಲೀನರ ಬದುಕು ಪಾವನ: ವೆಂಕಟೇಶ ಆಲ್ಕೋಡ

ಗದಗ ಪುಟ್ಟರಾಜ ಗವಾಯಿಗಳ 10ನೇ ಪುಣ್ಯಸ್ಮರಣೆ ಕಾರ್ಯಕ್ರಮ
Last Updated 28 ಆಗಸ್ಟ್ 2020, 14:57 IST
ಅಕ್ಷರ ಗಾತ್ರ

ರಾಯಚೂರು: ‘ಸಂಗೀತ, ಸಾಹಿತ್ಯ, ಪುರಾಣ, ಪ್ರವಚನ ಸೇರಿದಂತೆ ತ್ರಿಕಾಲ ಜ್ಞಾನಿಗಳಾಗಿದ್ದ ಗದಗ ಪಂಡಿತ್‌ ಪುಟ್ಟರಾಜ ಗವಾಯಿಗಳ ಸಮಕಾಲೀನರಾಗಿ ಬದುಕಿದ ನಮ್ಮೆಲ್ಲರ ಬದುಕು ಪಾವನವಾಗಿದೆ’ ಎಂದು ಜಿಲ್ಲಾ ಕಲಾವಿದರ ಸಂಘದ ಗೌರವಾಧ್ಯಕ್ಷ ವೆಂಕಟೇಶ ಆಲ್ಕೋಡ ಹೇಳಿದರು.

ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನ ಆವರಣದ ಸಭಾ ಭವನದಲ್ಲಿ ಶ್ರೀ ಗಾನಯೋಗಿ ಸಂಗೀತ ಪಾಠಶಾಲೆಯಿಂದ ಶುಕ್ರವಾರ ಆಯೋಜಿಸಿದ್ದ ಗಾನಯೋಗಿ ಪುಟ್ಟರಾಜ ಗವಾಯಿಗಳವರ 10 ನೇ ಪುಣ್ಯತಿಥಿ ನಿಮಿತ್ತ ಸಂಗೀತ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪುಟ್ಟರಾಜರು ಬರೀ ಸಂಗೀತಗಾರರು ಎಂಬುದಾಗಿ ಜನಸಾಮಾನ್ಯರು ಗುರುತಿಸುತ್ತಾರೆ. ಆದರೆ, ಅವರು ಬರೆದಿರುವ ವಚನಗಳು ನಾಡಿನಾದ್ಯಂತ ಗಾಯನ ರೂಪದಲ್ಲಿ ಜನಮನದಲ್ಲಿ ನೆಲೆಯೂರಿವೆ. ಗವಾಯಿಗಳು ನಮ್ಮದ ಭೌತಿಕವಾಗಿ ದೂರವಾದರೂ ಮುಂಬರುವ ಪೀಳಿಗೆಗಳು ಸ್ಮರಿಸುವಂತಹ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.

‘ಎರಡು ವರ್ಷದ‌ ಮಗುವಾಗಿದ್ದಾಗ ಕಣ್ಣಿಗೆ ಹಾಕಿದ ಔಷಧಿಯ ದುಷ್ಪರಿಣಾಮದಿಂದ ದೃಷ್ಟಿ ಕಳೆದುಕೊಂಡರು. ತಂದೆಯೂ ಬೇಗನೆ ತೀರಿ ಹೋಗಿದ್ದರಿಂದ ಅವರು ಸೋದರಮಾವನ ಆಶ್ರಯದಲ್ಲಿ ಬೆಳೆಯಬೇಕಾಯಿತು.‌ಆನಂತರ ಗದಗದ ಪಂಚಾಕ್ಷರಿ ಗವಾಯಿಗಳವರ ಗರಡಿಯಲ್ಲಿ‌ ಪಳಗಿದರು. ನಭೂತೋ ನಭವಿಷ್ಯತಿ ಎನ್ನುವ ಸಾಧನೆ ಮಾಡಿದ್ದಾರೆ’ ಎಂದು ಸ್ಮರಿಸಿದರು.

‘ಗದಗದ ಪುಟ್ಟರಾಜ ಗವಾಯಿಗಳು ಬಸವ ಧರ್ಮ ಪುರಾಣವನ್ನು ಹಿಂದಿಗೆ ತರ್ಜುಮೆ ಮಾಡಿದ್ದಾರೆ. ತುಲಾಭಾರ ಚಕ್ರವರ್ತಿ ಆಗಿದ್ದ ಅವರು, ಎಂದಿಗೂ ಪ್ರಶಸ್ತಿ, ಬಿರುದುಗಳ ಬೆನ್ನುಹಿಂದೆ ಹೋಗಲಿಲ್ಲ. ಅವರನ್ನು ಸನ್ಮಾನಿಸಿದ ಗೌರವಿಸುವ ಮೂಲಕ ಸಂಘ–ಸಂಸ್ಥೆಗಳು ತಮ್ಮ ಹೆಸರು ಹೆಚ್ಚಿಸಿಕೊಂಡವು. ‌ಸಮಾಜದಲ್ಲಿನ‌ ಅನಾಥರು, ಅಂಧರನ್ನು ನನ್ನ ಜೋಳಿಗೆಗೆ ಹಾಕುವಂತೆ ಹೇಳಿದ ಮಹಾನ್‌ ಆದರ್ಶ ಪಾಲಕರು ಅವರಾಗಿದ್ದಾರೆ’ ಎಂದರು.

ಆರ್ಟ್‌ ಆಫ್‌ ಲೀವಿಂಗ್‌ ಜಿಲ್ಲಾ ಪ್ರತಿನಿಧಿ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಯೋಗ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ಒತ್ತಡದ‌ ಬದುಕಿನಿಂದ ಹೊರಬರಲು ಇವೆರಡು ರೂಢಿಸಿಕೊಳ್ಳಬೇಕಿದೆ. ಸಂಗೀತ ಕಲಿಯಲು ವಯಸ್ಸು ಮುಖ್ಯವಲ್ಲ. ಕನಿಷ್ಠ ಸಂಗೀತ ಕೇಳುವ ಹವ್ಯಾಸ ಇಟ್ಟುಕೊಂಡು ಬಾಳಬೇಕು. ಕುಟುಂಬದ ನಿರ್ವಹಣೆಯಿಂದ ಒತ್ತಡ ಅನುಭವಿಸುವ ಮಹಿಳೆಯರಿಗೆ ಯೋಗ, ಸಂಗೀತದ ಕಲಿಕೆ ಅತ್ಯವಶ್ಯ ಎಂದು ಸಲಹೆ ನೀಡಿದರು.

ಶ್ರೀಗಾನಯೋಗಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಹಾಗೂ ಜೈ ಗುರುದೇವ ಸಂಗೀತ ಕಲಾ ಬಳಗದ ಹವ್ಯಾಸಿ ಪತ್ರಕರ್ತರು ಸಂಗೀತ ಸೇವೆ ಸಲ್ಲಿಸಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಸಯ್ಯ ಸ್ವಾಮಿ ಕುರ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಉದಯನಗರದ ವೆಂಕಟೇಶ್ವರ ‌ದೇವಸ್ಥಾನದ ಅಧ್ಯಕ್ಷ ಬಾಲಚಂದ್ರಪ್ಪ‌ ಮಸ್ಕಿ, ಉಪಾಧ್ಯಕ್ಷ ಕೃಷ್ಣದಾಸ ಅಸ್ಕಿಹಾಳ, ಎಲ್‌ವಿಡಿ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ವೀರಯ್ಯಸ್ವಾಮಿ ಇದ್ದರು.

ಶ್ರೀ ಗಾನಯೋಗಿ ಸಂಗೀತ ಪಾಠಶಾಲೆಯ ಮುಖ್ಯಸ್ಥ ರಾಘವೇಂದ್ರ ಆಶಾಪೂರ ಸ್ವಾಗತಿಸಿದರು. ಶಶಿಧರ ಹೂಗಾರ, ಅನಿಲಕುಮಾರ ಮರ್ಚೆಡ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT