ಮಂಗಳವಾರ, ಮೇ 24, 2022
27 °C
ಅವ್ಯವಸ್ಥೆಯ ಆಗರಗಳಾದ ಸರ್ಕಾರಿ ಖಾಲಿ ಜಾಗಗಳು!, ದಂಡ ವಿಧಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ– ಆರೋಪ

ಬಯಲು ಬಹಿರ್ದೆಸೆ ಮುಕ್ತವಾಗದ ರಾಯಚೂರು ನಗರ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲಾ ಕೇಂದ್ರವೂ ಸೇರಿ ಎಲ್ಲ ನಗರ ಹಾಗೂ ಪಟ್ಟಣಗಳಲ್ಲಿರುವ ಸರ್ಕಾರಿ ಖಾಲಿ ಜಾಗಗಳು ಬಯಲು ಬಹಿರ್ದೆಸೆ ತಾಣಗಳಾಗಿ ಮಾರ್ಪಟ್ಟಿವೆ. ಈ ಜಾಗಗಳಿಗೆ ಹೊಂದಿಕೊಂಡು ಮನೆ ಕಟ್ಟಿಕೊಂಡವರು ಸಂಕಷ್ಟ ಅನುಭವಿಸುತ್ತಿದ್ದು, ಸ್ಥಳೀಯ ಆಡಳಿತ ಸಂಸ್ಥೆ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

ಯಾರು ಏನಾದರೂ ಅಂದುಕೊಳ್ಳಲಿ ಎಂದು ಖಾಲಿ ನಿವೇಶನಗಳಲ್ಲಿ ಕೆಲವು ಜನರು ರಾಜಾರೋಷ ಹೊಲಸು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದವರ ಮನೆಗಳ ಮುಂದೆಯೇ ರಾತ್ರೋರಾತ್ರಿ ಗಲೀಜು ಮಾಡಿ ಬರುವ ಹಠಮಾರಿಗಳಿದ್ದಾರೆ. ಇಂತಹ ಜನಗಳಿಗೆ ದಂಡ ವಿಧಿಸಿ ಬುದ್ಧಿ ಹೇಳಬೇಕಿರುವ ನಗರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾ ವಹಿಸಿ ಕ್ರಮ ಕೈಗೊಳ್ಳುತ್ತಿಲ್ಲ. ದೂರು ಸಲ್ಲಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಇದರ ಪರಿಣಾಮದಿಂದ ರಾಯಚೂರು, ಸಿಂಧನೂರು ನಗರಗಳಲ್ಲಿ ಹಾಗೂ ಇನ್ನುಳಿದ ಪಟ್ಟಣ ಕೇಂದ್ರಗಳಲ್ಲಿ ಸರ್ಕಾರಿ ಖಾಲಿ ನಿವೇಶನಗಳು ಸೇರಿ ನಿರ್ವಹಣೆ ನಿರ್ಲಕ್ಷ್ಯ ವಹಿಸಿರುವ ಖಾಸಗಿಯವರ ನಿವೇಶನಗಳು ಕೂಡಾ ಸಮಸ್ಯೆ ಸೃಷ್ಟಿಸುತ್ತಿರುವ ತಾಣಗಳಾಗಿವೆ. ಬಯಲು ಬಹಿರ್ದೆಸೆ  ಕಾರಣದಿಂದ ಹಂದಿಗಳು ಮುಗಿ ಬೀಳುತ್ತಿವೆ. ಈ ಹಂದಿಗಳಿಗೆ ಉಪಟಳ ನೀಡುವುದಕ್ಕೆ ಬೀದಿನಾಯಿಗಳು ಬರುತ್ತಿವೆ. ಹೀಗೆ ಒಂದುಕ್ಕೊಂದು ಸಮಸ್ಯೆಗಳಿಗೆ ಖಾಲಿ ಜಾಗಗಗಳು ಪೂರಕವಾಗಿವೆ.

ಸರ್ಕಾರಿ ಮಾಹಿತಿ ಪ್ರಕಾರ, ಕೊಳೆಗೇರಿಯಿಂದ ಹಿಡಿದು ಅಭಿವೃದ್ಧಿಯಾದ ಎಲ್ಲ ಬಡಾವಣೆ ಮನೆಗಳಿಗೂ ಶೌಚಾಲಯವಿದೆ. ಒಂದು ವೇಳೆ ಶೌಚಾಲಯ ಇಲ್ಲದವರು ಕಟ್ಟಿಕೊಳ್ಳುವುದಕ್ಕೆ ಈಗಲೂ ಸಹಾಯಧನ ನೀಡಲಾಗುತ್ತಿದೆ. ರಾಯಚೂರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ವಾಸ್ತವ ಚಿತ್ರಣ ಬೇರೆಯದ್ದೆ ಇದೆ. ಶೌಚಾಲಯ ಕಟ್ಟಿಸಿಕೊಳ್ಳುವುದಕ್ಕೆ ಸಹಾಯಧನ ನೀಡುವಂತೆ ಸರ್ಕಾರ ಯೋಜನೆ ರೂಪಿಸಿದರೂ ರಾಯಚೂರು ನಗರಸಭೆ ಮಾತ್ರ, ಇನ್ನೂ ಎರಡು ದಶಕಗಳ ಹಿಂದಿನ ಮಾಹಿತಿಯನ್ನೇ ಇಟ್ಟುಕೊಂಡು ಕುಳಿತಿದೆ. ಅರ್ಜಿ ಸಲ್ಲಿಸಿದವರನ್ನು ಪರಿಗಣಿಸಿ ಪ್ರಯೋಜನ ಒದಗಿಸುತ್ತಿಲ್ಲ ಎಂದು ದೂರು ಜನರದ್ದು.

‘ಕೆಲವು ಜನರು ಬಯಲು ಬಹಿರ್ದೆಸೆಗೆ ಹೋಗುವ ಮನಸ್ಥಿತಿಯಿಂದ ಹೊರಬಂದಿಲ್ಲ. ಶೌಚಾಲಯ ಇದ್ದರೂ ಬಳಕೆ ಮಾಡುತ್ತಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಬಯಲು ಬಹಿರ್ದೆಸೆಗೆ ಹೋಗುವವರಿಗೆ ಆರಂಭದಲ್ಲಿ ತಿಳಿವಳಿಕೆ ನೀಡಿ, ಆನಂತರ ದಂಡ ವಿಧಿಸುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು‘ ಎನ್ನುತ್ತಾರೆ ರಾಯಚೂರು ನಗರದ ಇಂದಿರಾನಗರ ನಿವಾಸಿ ತಿಮ್ಮಪ್ಪ ಅವರು.

ಮೌನವಹಿಸಿದ ಮಸ್ಕಿ ಪುರಸಭೆ

ಮಸ್ಕಿ: ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲವು ಖಾಸಗಿ ಬಯಲು‌ ಜಾಗ ಹಲವಾರು ವರ್ಷಗಳಿಂದ ಸಾರ್ವಜನಿಕರ ಬಯಲು ಬಹಿರ್ದೆಸೆಯ ತಾಣಗಳಾಗಿ ಮಾರ್ಪಟ್ಟಿವೆ.

ಪಟ್ಟಣದ ಹೃದಯ ಭಾಗದಲ್ಲಿರುವ ಈ ಜಾಗ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಡುತ್ತಿದೆ ಎಂಬ ಕಾರಣಕ್ಕೆ ಈ ಜಾಗದ ಮಾಲೀಕರಿಗೆ ಕಟ್ಟಡ ಕಟ್ಟಲು ಅನುಮತಿ ನೀಡದ ಕಾರಣ ಹಲವಾರು ವರ್ಷಗಳಿಂದ ಜಾಲಿ ಗಿಡಗಂಟೆಗಳು ಬೆಳೆದು ಸುತ್ತಮುತ್ತಲಿನ ಸಾರ್ವಜನಿಕರ ಬಹಿರ್ದೆಸೆಯ ತಾಣವಾಗಿವೆ.

ಸ್ಥಳೀಯ ಪುರಸಭೆ ಆಡಳಿತ ಬಯಲು ಜಾಗೆಯ ಖಾಸಗಿ ವ್ಯಕ್ತಿಗಳಿಗೆ ನೋಟೀಸ್ ನೀಡಿ ಖಾಲಿ ಜಾಗವನ್ನು ಸ್ವಚ್ಛ ಇಡುವಂತೆ ಸೂಚಿಸುವಲ್ಲಿ ವಿಫಲವಾಗಿದೆ. ಪ್ರತಿನಿತ್ಯ ನೂರಾರು ಜನರು ಇದೇ ಸ್ಥಳದಲ್ಲಿ ಬಹಿರ್ದೆಸೆ ಗೆ ಹೋಗುತ್ತಿದ್ದರು ಪುರಸಭೆ ಮೌನವಹಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೌಚಾಲಯಗಳ ಕೊರತೆ; ಪರದಾಟ

ಮಾನ್ವಿ: ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಸರ್ಕಾರಿ ಜಾಗಗಳು, ಕಚೇರಿಗಳ ಕಾಂಪೌಂಡ್ ಗೋಡೆಗಳು ಬಹಿರ್ದೆಸೆ, ಮೂತ್ರಾಲಯಗಳಾಗಿವೆ.

ಸರ್ಕಾರಿ ಕಚೇರಿಗಳಲ್ಲಿಯೂ ಶೌಚಾಲಯ ಸಮಸ್ಯೆ ಇರುವ ಕಾರಣ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಕಚೇರಿ ಕೆಲಸಗಳಿಗಾಗಿ ಆಗಮಿಸುವ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಇದೆ. ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಹಾಗೂ ಕೃಷಿ ಇಲಾಖೆ ಕಚೇರಿ ಪಕ್ಕದ ಜಾಗ, ಟಿಎಪಿಸಿಎಂಎಸ್ ಆವರಣ, ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲಿ ಸಂತೆ ಮಾರುಕಟ್ಟೆಗೆ ಹೊಂದಿಕೊಂಡು ಇರುವ ಗೋದಾಮುಗಳ ಪಕ್ಕದ ಜಾಗದ, ರೈತ ಭವನ, ಹಲವು ನಿರುಪಯುಕ್ತ ಸರ್ಕಾರಿ ಭವನಗಳು ಬಹಿರ್ದೆಸೆಯ ತಾಣಗಳಾಗಿವೆ.

ಪಟ್ಟಣದ ಪ್ರಮುಖ ಹಾಗೂ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಪುರಸಭೆ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯವಹಿಸಲಾಗಿದೆ ಎಂಬುದು ಸ್ಥಳೀಯರ ಆರೋಪ.

ಗೋದಾಮು ಬಳಿ ಗಲೀಜು

ದೇವದುರ್ಗ: ಪಟ್ಟಣದ ಆಡಳಿತ ಕೇಂದ್ರವಾದ ಮಿನಿವಿಧಾನಸೌಧ ಎದುರುಗಡೆ ಬರುವ ಪುರಸಭೆ ಮಳಿಗೆಗಳ ಹತ್ತಿರದ ಆಹಾರ ಇಲಾಖೆಯ ಗೋದಾಮು ಮುಂಭಾಗದಲ್ಲಿ ಸಾರ್ವಜನಿಕರು ಸಾಮೂಹಿಕವಾಗಿ ಮಲ-ಮತ್ರ ವಿಸರ್ಜನೆ ಮಾಡುತ್ತಿದ್ದಾರೆ.

ವಿವಿಧ ಕೆಲಸ ನಿಮಿತ್ತ ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರು ಮುಂಭಾಗದಲ್ಲಿಯೇ ಗೋದಾಮು ಮುಂಭಾಗ ಹಾಗೂ ಹಿಂಭಾಗದಲ್ಲಿ ಇರುವ ಖಾಲಿ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುವುದರ ಮೂಲಕ ಸುತ್ತಲಿನ ವಾತಾವರಣ ಕೆಟ್ಟ ದುರ್ನಾತದಿಂದ ನಾರುತ್ತಿದೆ. ಕಬ್ಬಿಣದ ಗೇಟ್ ಗಳನ್ನು ನಿರ್ಮಿಸಿ ಸಾರ್ವಜನಿಕರು ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸ್ಥಳೀಯ ವ್ಯಾಪಾರಸ್ಥರು, ಪುರಸಭೆ ಮಳಿಗೆಯಲ್ಲಿರುವ ವ್ಯಾಪಾರಸ್ಥರು ಮತ್ತು ಪಶು ಆಸ್ಪತ್ರೆಯ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.