ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಆಂಧ್ರಕ್ಕೆ ಬಸ್‌ ಇದ್ದರೂ ಪ್ರಯಾಣಿಕರಿಲ್ಲ!

‘ಸೇವಾ ಸಿಂಧು’ ಅ್ಯಪ್‌ನಲ್ಲಿ ನೋಂದಣಿ ಮಾಡಿದವರಿಗಷ್ಟೇ ಸೇವೆ
Last Updated 19 ಜೂನ್ 2020, 20:00 IST
ಅಕ್ಷರ ಗಾತ್ರ

ರಾಯಚೂರು: ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಮಂತ್ರಾಲಯಕ್ಕೆ ಎನ್‌ಇಕೆಆರ್‌ಟಿಸಿಯಿಂದ ಬಸ್‌ ಸಂಚಾರ ಸೇವೆ ಆರಂಭಿಸಿ ಮೂರು ದಿನಗಳಾಗಿದ್ದರೂ, ಸಂಚರಿಸಲು ಪ್ರಯಾಣಿಕರು ಬರುತ್ತಿಲ್ಲ!

ಕೇಂದ್ರ ಬಸ್‌ ನಿಲ್ದಾಣ ಫ್ಲಾಟ್‌ಫಾರಂನಲ್ಲಿ ರಾಯಚೂರು–ಮಂತ್ರಾಲಯ ಫಲಕ ಹಾಕಿಕೊಂಡ ಬಸ್‌ಗಳು ಪ್ರಯಾಣಿಕರಿಗಾಗಿ ಸದಾ ಕಾಯುತ್ತಿರುವ ದೃಶ್ಯ ಕಾಣುತ್ತದೆ. ಅನಿವಾರ್ಯವಾಗಿ, ರಾಜ್ಯದ ಗಡಿ ಗ್ರಾಮ ಗಿಲ್ಲೇಸುಗೂರುವರೆಗೂ ತೆರಳುವ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಸಂಚರಿಸುವ ಪ್ರಯಾಣಿಕರ ಸಂಖ್ಯೆ ಸಹಜ ಸ್ಥಿತಿಗೆ ಬರಬಹುದು ಎಂದು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ.

ರಾಯಚೂರಿನಿಂದ ಸುಕ್ಷೇತ್ರ ಮಂತ್ರಾಲಯಕ್ಕೆ ಹೋಗಿ ಬರುವ ಅಪೇಕ್ಷೆ ಉಳ್ಳವರು ಸಾಕಷ್ಟು ಜನರಿದ್ದಾರೆ. ಆದರೆ, ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಇನ್ನೂ ಸಾರ್ವಜನಿಕರಿಗೆ ದರ್ಶನಾವಕಾಶ ಮಾಡುತ್ತಿಲ್ಲ. ಕೋವಿಡ್‌ ಸೋಂಕು ತಡೆ ಮುನ್ನಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಆಗುವುದಕ್ಕಾಗಿ ಮಠದಲ್ಲಿ ಇನ್ನೂ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜನಸಾಮಾನ್ಯರು ಸಂಚರಿಸುವುದಕ್ಕೆ ತೊಡಕಾಗಿರುವ ಇನ್ನೊಂದು ಪ್ರಮುಖ ಸಂಗತಿಯೆಂದರೆ; ಮಂತ್ರಾಲಯದಿಂದ ಮರಳಿದ ಬಳಿಕ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎನ್ನುವ ನಿಯಮ. ಅಲ್ಲದೆ, ಆಂಧ್ರಪ್ರದೇಶಕ್ಕೆ ಹೋಗುವವರು ರಾಜ್ಯ ಸರ್ಕಾರದ ‘ಸೇವಾ ಸಿಂಧು’ ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದೆ.

ಇಂಧನ ವೆಚ್ಚ: ಜಿಲ್ಲೆಯಿಂದ ದೂರದ ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಸೇರಿದಂತೆ ವಿವಿಧ ಕಡೆಗೆ ಸಂಚರಿಸುತ್ತಿರುವ ಬಸ್‌ಗಳಲ್ಲಿಯೂ ಕೂಡಾ ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ. ಬಸ್‌ ಸಂಚಾರಕ್ಕೆ ವ್ಯಯವಾಗುವ ಇಂಧನದ ವೆಚ್ಚ ಸಹ ಸಂಗ್ರಹ ಆಗುತ್ತಿಲ್ಲ. ಸಂಪೂರ್ಣ ನಷ್ಟದಲ್ಲೇ ಬಸ್‌ಗಳು ಸಂಚರಿಸುತ್ತಿವೆ. ಈ ಮೊದಲು ಗ್ರಾಮೀಣ ಭಾಗಗಳಿಗೆ ಸಂಚರಿಸುವ ಬಸ್‌ಗಳಿಂದ ಅಧಿಕ ನಷ್ಟವಿತ್ತು. ಈಗ ಗ್ರಾಮೀಣ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ಹೋಗುತ್ತಿದ್ದಾರೆ. ದೂರದ ಊರುಗಳಿಗೆ ಸಂಚರಿಸುವ ಬಸ್‌ಗಳಿಂದ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಬಸ್‌ ನಿರ್ವಾಹಕರು, ಚಾಲಕರು ಹೇಳುತ್ತಿದ್ದಾರೆ.

ಜನದಟ್ಟಣೆಗೆ ಕಡಿವಾಣ: ಕೇಂದ್ರ ಬಸ್‌ ನಿಲ್ದಾಣದೊಳಗೆ ಈ ಮೊದಲು ಪ್ರಯಾಣಿಸದ ಜನರೇ ಹೆಚ್ಚಾಗಿ ನೆರೆಯುತ್ತಿದ್ದರು. ಈಗ ಸ್ಥಿತಿ ಬದಲಾಗಿದ್ದು, ಜನಸಂದಣಿ ಏರ್ಪಡುವುದಕ್ಕೆ ಅವಕಾಶ ನೀಡುತ್ತಿಲ್ಲ. ಖಾಸಗಿ ಬೈಕ್‌, ವಾಹನಗಳನ್ನು ನಿಲ್ದಾಣದೊಳಗೆ ತೆಗೆದುಕೊಂಡು ಹೋಗಲು ಸಂಪೂರ್ಣ ನಿರ್ಬಂಧಿಸಲಾಗಿದೆ.

ಪ್ರಯಾಣಿಕರಿಗಾಗಿ ಬಸ್‌ ನಿರ್ವಾಹಕರು ಮತ್ತು ಚಾಲಕರು ಗಂಟೆಗಟ್ಟಲೇ ಕಾಯುತ್ತಿದ್ದಾರೆ. ನಿಲ್ದಾಣದೊಳಗೆ ಜನಸಂದಣಿಗಿಂತಲೂ ನೌಕರರದ್ದೆ ಗುಂಪುಗಳು ಕಾಣಿಸುತ್ತಿವೆ. ಸಹಜ ಸ್ಥಿತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT