ರಾಯಚೂರು: ರಾಜ್ಯ ಸರ್ಕಾರವು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿತಗೊಂಡಿರುವ ಏಳು ವಿಶ್ವವಿದ್ಯಾಲಯಗಳು ಹಾಗೂ ಸಂಯೋಜನಾ ವಿಶ್ವವಿದ್ಯಾಲಯಗಳು ಮೇಲ್ದರ್ಜೆಗೇರಿಸುವ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಆಗಸ್ಟ್ 2020 ರಲ್ಲಿ ಪ್ರಾರಂಭಗೊಂಡ ರಾಯಚೂರು ವಿಶ್ವವಿದ್ಯಾಲಯಗಳಿಗೆ ಕೇಂದ್ರೀಕೃತವಾಗಿ ಆನ್‌ಲೈನ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಆನಂತರ ಮಾತನಾಡಿದ ಅವರು, ಉನ್ನತ ಶಿಕ್ಷಣ ಗುಣಮಟ್ಟ ನಿಟ್ಟಿನಲ್ಲಿ ಚಾಲನೆಗೊಂಡಿರುವ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜ ಹಾಗೂ ಯುವ ಪೀಳಿಗೆಗಳಿಗೆ ಕೊಡುಗೆ ನೀಡಬೇಕು. ದೂರ ದೃಷ್ಟಿವುಳ್ಳ ಹಾಗೂ ಅಭಿವೃದ್ಧಿ ಆವಿಷ್ಕಾರ ಸಂಶೋಧನೆಗಳಿಗೆ ಒತ್ತು ನೀಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಸರ್ಕಾರ ಸದಾ ಮಾಡುತ್ತದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥನಾರಾಯಣ ಮಾತನಾಡಿ, ವಿದ್ಯಾರ್ಥಿಗಳನ್ನು ಕೇವಲ ಪದವಿ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಸದೇ ವಿಶ್ವದ ಯಾವುದೇ ಮೂಲೆಯಲ್ಲಿ ಅಡಗಿರುವ ಜ್ಞಾನ ಪ್ರತಿಭೆ ಕೌಶಲ್ಯ ಹೊರತರುವುದಲ್ಲದೆ ಅವುಗಳನ್ನು ಪ್ರೊತ್ಸಾಹಿಸುವ ಉತ್ತಮ ವೇದಿಕೆಗಳಾಗಿ ವಿಶ್ವವಿದ್ಯಾಲಯಗಳಾಗಿ ರೂಪಿಸಲಾಗಿವೆ ಎಂದು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಹರೀಶ ರಾಮಸ್ವಾಮಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗವಾದ ರಾಯಚೂರಿನಲ್ಲಿ ಸ್ಥಾಪಿಸಿರುವ ರಾಯಚೂರು ವಿಶ್ವವಿದ್ಯಾಲಯವು ಹಿಂದಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ತನ್ನ ಮಾತೃ ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಕೇಂದ್ರ ಸರ್ಕಾರದಿಂದ ಘೋಷಿಸಲ್ಪಟ್ಟ ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ತನ್ನ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಒಳಗೊಂಡ ರಾಯಚೂರು ವಿಶ್ವವಿದ್ಯಾಲಯವು ರಾಯಚೂರನ್ನು ಕೇಂದ್ರಸ್ಥಾನವನ್ನಾಗಿರಿಸಿ ಸ್ಥಾಪಿತವಾಗಿದೆ ಎಂದರು.
ಕುಲಸಚಿವ ಪ್ರೊ.ವಿಶ್ವನಾಥ ಎಂ., ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ ಎಂ., ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ, ವಿವಿಧ ನಿಕಾಯಗಳ ಡೀನರುಗಳಾದ ಪ್ರೊ.ನುಸ್ರತ್ ಫಾತಿಮಾ, ಪ್ರೊ.ಪಾರ್ವತಿ ಸಿ.ಎಸ್., ಪ್ರೊ.ಪಿ.ಭಾಸ್ಕರ್, ಸಿಡಿಸಿ ನಿರ್ದೇಶಕರು ಡಾ.ರಾಘವೇಂದ್ರ ಫತ್ತೇಪುರ,ಎಂಜಿನಿಯರ್ ಪಂಪಾಪತಿ ಇದ್ದರು.
ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.