ಲಿಂಗಸುಗೂರು: ನಿರಂತರ ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿದ್ದ ರೈತರು ಪ್ರಸಕ್ತ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿದ್ದರಿಂದ ಹರ್ಷದಲ್ಲಿದ್ದರು. ಆದರೆ, ಹದಿನೈದು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಸುರಿಯುತ್ತಿರುವ ಮಳೆಯಿಂದ ರೈತರ ಕನಸು ಭಗ್ನಗೊಂಡು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.
ನಾರಾಯಣಪುರ ಬಲದಂಡೆ ಮತ್ತು ರಾಂಪೂರ ಮವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಕೆಲ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಮಸ್ಕಿ ಹೋಬಳಿ ಸೇರಿದಂತೆ ಅಖಂಡ ತಾಲ್ಲೂಕಿನಲ್ಲಿ 1,94,010 ಹೆಕ್ಟೇರ್ ಭೌಗೋಳಿಕ ಪ್ರದೇಶ ಹೊಂದಿದೆ. 1,55,240 ಹೆಕ್ಟೇರ್ ಸಾಗುವಳಿ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ 69,850 ಹೆಕ್ಟೇರ್ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ದೃಢಪಡಿಸುತ್ತದೆ.
ತಾಲ್ಲೂಕಿನಲ್ಲಿ ತೊಗರಿ ಬಿತ್ತನೆ ಪ್ರದೇಶ ಗುರಿ 35,737 ಹೆಕ್ಟೇರ್ ಹೊಂದಿತ್ತು. ಆದರೆ ನಿರೀಕ್ಷೆಗೂ ಮೀರಿ ಸಾಧನೆ 48030 ಹೆಕ್ಟೇರ್ ಬಿತ್ತನೆ ಆಗಿದೆ. ಹೆಸರು ಬಿತ್ತನೆ ಗುರಿ 50 ಹೆಕ್ಟೇರ್ ಸಾಧನೆ 107 ಹೆಕ್ಟೇರ್ ಆಗಿದೆ. ಅಲಸಂದಿ ಬಿತ್ತನೆ ಗುರಿ 10 ಹೆಕ್ಟೇರ್ ಸಾಧನೆ 12 ಹೆಕ್ಟೇರ್ ಆಗಿದೆ. ಒಟ್ಟಾರೆ ದ್ವಿದಳ ಧಾನ್ಯದ ಬಿತ್ತನೆ ಗುರಿ 35,857 ಹೆಕ್ಟೇರ್ ಹೊಂದಿತ್ತು. ಸಾಧನೆ 48,239 ಹೆಕ್ಟೇರ್ ಆಗಿದೆ. ಭತ್ತದ ಬಿತ್ತನೆ ಗುರಿ 7000 ಹೆಕ್ಟೇರ್ ಹೊಂದಿದ್ದು ಈ ತನಕ 6414 ಹೆಕ್ಟೇರ್ ಬಿತ್ತನೆ ಆಗಿದೆ.
ಮುಂಗಾರು ಹಂಗಾಮಿನಲ್ಲಿ 228 ಎಂ.ಎಂ ಮಳೆ ನಿರೀಕ್ಷೆ ಹೊಂದಲಾಗಿತ್ತು. ಜೂನ್‌ನಿಂದ ಆಗಸ್ಟ್ 26ರ ವರೆಗೆ 336 ಎಂ.ಎಂ ಮಳೆ ಆಗಿದೆ. ಶೇ 61ರಷ್ಟು ಹೆಚ್ಚಿನ ಮಳೆ ಆಗಿರುವುದು ದಾಖಲೆ. ಹೀಗಾಗಿ ತಾಲ್ಲೂಕಿನಾದ್ಯಂದ ಏಕದಳ, ದ್ವಿದಳ, ಎಣ್ಣೆಕಾಳು ಬೆಳೆಗಳು ಫಲವತ್ತಾಗಿ ಬೆಳೆದಿವೆ. ಹದಿನೈದು ದಿನಗಳಿಂದ ಮೇಲಿಂದ ಮೇಲೆ ಮಳೆ ಬೀಳುತ್ತಿದ್ದು ಕೆಲ ಪ್ರದೇಶಗಳಲ್ಲಿ ತೊಗರಿ ಬೆಳೆ ಸಿಡಿ ರೋಗದಿಂದ ಒಣಗುವ ಬಾಧೆ ಕಾಣಿಸಿಕೊಂಡಿದೆ.
ಕಳೆದ ವರ್ಷ ಮಾರುಕಟ್ಟೆಯಲ್ಲಿ ತೊಗರಿಗೆ ಉತ್ತಮ ದರ ಇತ್ತು. ಹೀಗಾಗಿ ಹೆಚ್ಚಿನ ರೈತರು ತೊಗರಿ ಸೇರಿದಂತೆ ದ್ವಿದಳ ಧಾನ್ಯ ಬಿತ್ತನೆ ಮಾಡಿಕೊಂಡಿದ್ದಾರೆ. ಹದಿನೈದು ದಿನಗಳ ನಿರಂತರ ಜಿಟಿಜಿಟಿ ಮಳೆಗೆ ತಂಪು ಹೆಚ್ಚಾಗಿ, ನೀರು ನಿಲ್ಲುವ ಹರಿ ಮತ್ತು ತೆಗ್ಗು ಪ್ರದೇಶಗಳಲ್ಲಿ ಅತಿಯಾದ ತೇವಾಂಶದಿಂದ ಬೇರುರೋಗ (ಡ್ರೈ ರೂಟ್‌ರಾಟ್)ಕ್ಕೆ ಬೆಳೆ ಒಣಗುತ್ತಿದ್ದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದು ರೈತರ ಸಾಮೂಹಿಕ ಅಳಲು.
‘ತಾಲ್ಲೂಕಿನ ಕರಡಕಲ್ಲ, ನೀರಲಕೇರಿ, ಮರಗಂಟನಾಳ, ಚಿತ್ರನಾಳ, ಗುಂಡಸಾಗರ, ಈಚನಾಳ, ಯರಡೋಣಿ, ಹೊನ್ನಳ್ಳಿ, ಗೌಡೂರು, ಕುಪ್ಪಿಗುಡ್ಡ, ಸರ್ಜಾಪುರ, ಹೆಸರೂರು, ಮಾವಿನಭಾವಿ, ಹುನಕುಂಟಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬಿತ್ತನೆ ಪ್ರದೇಶದ ಶೇ 25ರಷ್ಟು ತೊಗರಿ ಬೆಳೆ ಹಾನಿಗೀಡಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣಗೊಂಡಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಪ್ರಸಾದರೆಡ್ಡಿ ಹೇಳಿಕೊಂಡಿದ್ದಾರೆ.
‘ತಾಲ್ಲೂಕಿನಾದ್ಯಂತ ತೊಗರಿ ಅತಿ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ರೈತರು ಬಂಪರ್ ಬೆಳೆ ಬೆಳೆದಿದ್ದರಿಂದ ಹರ್ಷದಲ್ಲಿದ್ದರು. ಆದರೆ, ಅತಿಯಾದ ಮಳೆಯಿಂದ ಬಹುತೇಕ ಕಡೆಗಳಲ್ಲಿ ಬೇರು ರೋಗದಿಂದ ಸಿಡಿರೋಗಕ್ಕೆ ತುತ್ತಾಗಿ ಬೆಳೆದು ನಿಂತ ಬೆಳೆ ಒಣಗಿದೆ. ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಒತ್ತಾಯಿಸಿದ್ದಾರೆ.
‘ತಾಲ್ಲೂಕಿನಾದ್ಯಂತ ರೈತರು ಗುರಿ ಮೀರಿದ ಬಿತ್ತನೆ ಮಾಡಿಕೊಂಡಿದ್ದರು. ಎಲ್ಲ ಬೆಳೆ ಫಲವತ್ತಾಗಿ ಬೆಳೆದು ನಿಂತಿವೆ. ತೊಗರಿ ಬೆಳೆ ಕೆಲವೆಡೆ ಅತಿಯಾದ ತೇವಾಂಶ ಇರುವಲ್ಲಿ ಬೇರುರೋಗದಿಂದ ಒಣಗುತ್ತಿದೆ. ನೀರು ನಿಲ್ಲದಂತೆ ಹಾಗೂ ಸಿಡಿರೋಗ ಹರಡದಂತೆ ಕ್ರಿಮಿನಾಶ ಬಳಕೆ ಮಾಡಬಹುದು. ಬೆಳೆ ನಷ್ಟ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ನಾಗರತ್ನ ಹುಲಕೋಟಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.