ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯಲ್ಲಿ ರಾಮನವಮಿ ಸರಳ ಆಚರಣೆ

ಪಾನಕ ಹಂಚುವ ಮೂಲಕ ಭಕ್ತಿ ಸಮರ್ಪಣೆ
Last Updated 21 ಏಪ್ರಿಲ್ 2021, 13:48 IST
ಅಕ್ಷರ ಗಾತ್ರ

ರಾಯಚೂರು: ಚೈತ್ರ ಮಾಸ ಶುಕ್ಲ ಪಕ್ಷದ ಒಂಭತ್ತನೇ ದಿನ ಬುಧವಾರ ರಾಮನವಮಿಯನ್ನು ಜಿಲ್ಲೆಯಾದ್ಯಂತ ಸರಳವಾಗಿ ಭಕ್ತಿ ಭಾವದಿಂದ ಆಚರಿಸಲಾಯಿತು.

ರಾಮನ ದೇವಸ್ಥಾನಗಳಲ್ಲಿ ಬೆಳಗಿನ ಜಾವದಿಂದಲೆ ವಿಶೇಷ ಪೂಜೆ, ಪುನಸ್ಕಾರಗಳು ಆರಂಭವಾಗಿದ್ದವು. ದೇವರಿಗೆ ವಿಶೇಷ ಪುಷ್ಪಾಲಂಕಾರ, ತರಹೇವಾರಿ ಹಣ್ಣುಗಳ ನೈವೈದ್ಯ ಹಾಗೂ ದೀಪಗಳನ್ನು ಬೆಳಗಿಸಲಾಗಿತ್ತು. ದೇವಸ್ಥಾನ ಒಳಾಂಗಣದಲ್ಲಿ ತಳೀರು ತೋರಣ ಕಟ್ಟಿ ಅಲಂಕಾರ ಮಾಡಲಾಗಿತ್ತು. ಜನ್ಮದಿನದ ನಿಮಿತ್ತ ಕೆಲವು ದೇವಸ್ಥಾನಗಳಲ್ಲಿ ತೊಟ್ಟಿಲೋತ್ಸವ ನೆರವೇರಿಸಲಾಯಿತು.

ರಾಯಚೂರು ನಗರ ಮಧ್ಯೆಭಾಗ ಸ್ಟೇಷನ್‌ ರಸ್ತೆಯ ರಾಮಮಂದಿರದಲ್ಲಿ ಮೂರ್ತಿ ಪೂಜೆ, ಅಲಂಕಾರವು ಗಮನ ಸೆಳೆಯುವಂತಿತ್ತು. ರಾಮ, ಸೀತಾ ಹಾಗೂ ಲಕ್ಷ್ಮಣ ಮೂರ್ತಿಗಳಿಗೆ ವಸ್ತ್ರಾಲಂಕಾರ, ಆಭರಣ ಹಾಗೂ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ನೇತಾಜಿ ನಗರದಲ್ಲಿರುವ ರಾಮ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ಪೂಜೆ ಏರ್ಪಡಿಸಲಾಗಿತ್ತು. ದರ್ಶನಕ್ಕಾಗಿ ಬರುವ ಭಕ್ತರೆಲ್ಲರೂ ಭಕ್ತಿಭಾವದಿಂದ ತೊಟ್ಟಿಲು ತೂಗಿ ನಮಿಸಿದರು.

ನಿಜಲಿಂಗಪ್ಪ ಕಾಲೋನಿಯ ಕೋದಂಡರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಗಂಗಾನಿವಾಸ ಮುಂಗಲಿ ಪ್ರಾಣದೇವರ ದೇವಸ್ಥಾನದ ಪ್ರವೇಶದ್ವಾರದ ಮೇಲೆ ಸ್ಥಾಪಿಸಿರುವ ಭವ್ಯ ರಾಮನ ಮೂರ್ತಿಗೆ ವಿಶೇಷ ಪೂಜೆ ನಡೆದವು.

ಎಲ್ಲ ದೇವಸ್ಥಾನಗಳಲ್ಲಿಯೂ ಭಕ್ತರು ಪಾನಕ ಹಂಚುವ ಮೂಲಕ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬುಧವಾರ ಸಂಜೆ ಸಾರ್ವಜನಿಕರಿಗೆ ಪಾನಕ ವಿತರಣೆ ನಡೆಯಿತು.

ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಪ್ರತಿವರ್ಷದಂತೆ ಭಕ್ತರು ದೇವಸ್ಥಾನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರದಿರಲಿಲ್ಲ. ಬೆರಳೆಣಿಕೆ ಸಂಖ್ಯೆಯಲ್ಲಿ ಮಾತ್ರ ದೇವಸ್ಥಾನ ಪ್ರವೇಶಿಸಿ ದರ್ಶನ ಪಡೆದು ಮರಳಿದರು. ಅರ್ಚಕರು ಹಾಗೂ ಭಕ್ತರೆಲ್ಲರೂ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT