ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ‘14ರಂದು ರಾಷ್ಟ್ರೀಯ ಲೋಕ ಅದಾಲತ್’

Published 4 ಸೆಪ್ಟೆಂಬರ್ 2024, 15:29 IST
Last Updated 4 ಸೆಪ್ಟೆಂಬರ್ 2024, 15:29 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಸೆಪ್ಟೆಂಬರ್ 14ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ.ಸಾತ್ವಿಕ್ ತಿಳಿಸಿದ್ದಾರೆ.    

ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಒಟ್ಟು 33,704 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಈ ಪೈಕಿ 16,288 ಸಿವಿಲ್ ಪ್ರಕರಣಗಳು ಹಾಗೂ 17,416 ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ 4,428  ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ಈಗಾಗಲೇ 2,178 ಪ್ರಕರಣಗಳನ್ನು ರಾಜಿ ಆಗುವ ಸಾಧ್ಯತೆ ಇರುವ ಪ್ರಕರಣ ಎಂದು ಗುರುತಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಮೋಟಾರು ವಾಹನ ಅಪಘಾತಕ್ಕೆ ಸಂಬಂಧಿಸಿದ 15 ಪ್ರಕರಣಗಳು, ರಾಜಿಯಾಗಬಹುದಾದ 49 ಕ್ರಿಮಿನಲ್ ಪ್ರಕರಣಗಳು, 219 ಚೆಕ್ ಬೌನ್ಸ್ ಪ್ರಕರಣಗಳಿವೆ. ಇದರೊಂದಿಗೆ ತೆರಿಗೆ ಪಾವತಿಸದಿರುವ ಪ್ರಕರಣಗಳಲ್ಲಿ ತೆರಿಗೆ ಸಂಗ್ರಹವನ್ನೂ ಮಾಡಲಾಗುತ್ತಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವವರ ಮನವೊಲಿಸಿ ಒಂದಾಗಿ ಬಾಳುವಂತೆ ಮಾಡಲಾಗುವುದು ಎಂದು ತಿಳಿಸಿದರು.

ನ್ಯಾಯಾಲಯದ ಶುಲ್ಕ ವಾಪಸ್: ಲೋಕ ಅದಾಲತ್‌ನಿಂದ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಇಲ್ಲಿ ರಾಜಿಯಾದ ಪ್ರಕರಣಗಳಲ್ಲಿ ಮಾಡಿದ ಆದೇಶಕ್ಕೆ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸುವ ಪ್ರಕರಣದಲ್ಲಿ ನೀಡಿದ ಆದೇಶದಷ್ಟೇ ಮಹತ್ವ ಇರುತ್ತದೆ. ಸಮಯ ಉಳಿಯುವ ಜತೆಗೆ ಕಕ್ಷಿದಾರರ ನಡುವಿನ ಸಂಬಂಧ ಚೆನ್ನಾಗಿ ಉಳಿಯುತ್ತದೆ. ಯಾವುದೇ ಕೋರ್ಟ್ ಫೀಸ್ ಕಟ್ಟಬೇಕಿಲ್ಲ. ಪ್ರಕರಣ ರಾಜಿಯಾದಲ್ಲಿ ಶೇ 100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು. ಲೋಕ ಅದಾಲತ್ ಅವಾರ್ಡ್ (ತೀರ್ಪು) ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT