ಭಾನುವಾರ, ಆಗಸ್ಟ್ 1, 2021
26 °C

ಕೆಕೆಆರ್‌ಡಿಬಿ ನಿಷ್ಕ್ರೀಯಗೊಳಿಸಿದ ಸರ್ಕಾರ: ರಝಾಕ್‌ ಉಸ್ತಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಅರ್‌ಡಿಬಿ) ಅಧಿಕಾರವನ್ನು ಕೇಂದ್ರೀಕೃತಗೊಳಿಸಿ ತನ್ನಲ್ಲೇ ಇಟ್ಟುಕೊಳ್ಳಬೇಕೆಂಬ ಕಾರಣಕ್ಕೆ ಇದುವರೆಗೂ ಸದಸ್ಯರನ್ನು ನೇಮಿಸಿಲ್ಲ. ಎರಡು ವರ್ಷದಿಂದ ಮಂಡಳಿಯನ್ನು ಸರ್ಕಾರವು ನಿಷ್ಕ್ರೀಯಗೊಳಿಸುತ್ತ ಬಂದಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮುಖಂಡ ರಝಾಕ ಉಸ್ತಾದ್‌ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಎಲ್ಲ ಸಚಿವರು, 12 ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಒಬ್ಬ ಸಂಸದರು, ಒಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯ, ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಐವರು ವಿಷಯ ಪರಿಣಿತರು ಮಂಡಳಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕಿತ್ತು. ಇದುವರೆಗೂ ಕ್ರಮವಾಗಿಲ್ಲ ಎಂದರು.

ಪೂರ್ಣ ಪ್ರಮಾಣದ ಮಂಡಳಿ ರಚನೆಯಾಗದೆ ಯಾವುದೇ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಅಥವಾ ಕಾಮಗಾರಿ ಬದಲಾವಣೆ ಮಾಡುವ ಅಧಿಕಾರ ಇಲ್ಲ. ಈ ಭಾಗದ ಅಭಿವೃದ್ದಿಗೆ ಮಂಡಳಿ ರಚಿಸಿದ್ದರೂ ಸರ್ಕಾರ ಮತ್ತೆ ಮಂಡಳಿಯ ಅಧಿಕಾರ ನಿಯಂತ್ರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಯೋಜನಾ ಇಲಾಖೆ ಸಚಿವ ನಾರಾಯಣಗೌಡ ಅವರು ಜುಲೈ 13ರಂದು ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನೆ ನಡೆಸುತ್ತಿರುವುದು ನಿಯಮ ಬಾಹಿರವಾಗಿದೆ. ಈ ಸಭೆಯನ್ನು ಶಾಸಕರು ಬಹಿಷ್ಕರಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯನ್ನು ಸಶಕ್ತಗೊಳಿಸುವ ಬದಲು ಅದನ್ನು ದುರ್ಬಲಗೊಳಿಸುವ ಉದ್ದೇಶದಿಂದ ಪ್ರಗತಿ ಪರಿಶೀಲನೆಗೆ ಸಚಿವರು ಬರುತ್ತಿದ್ದಾರೆ. ಕೂಡಲೇ ಸಭೆ ಮೊಟಕುಗೊಳಿಸಬೇಕು ಎಂದರು.

ಮಂಡಳಿಗೆ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಅಧ್ಯಕ್ಷರಾಗಲು ಕಾನೂನಿನಲ್ಲಿ ಅವಕಾಶ ನೀಡಿತ್ತು. ಈಗಿನ ಸರ್ಕಾರ ತಮ್ಮ ಪಕ್ಷದ ಶಾಸಕರನ್ನು ತೃಪ್ತಿಪಡಿಸಲು ಅದನ್ನು ತಿದ್ದುಪಡಿ ಮಾಡಿ ಅಧ್ಯಕ್ಷರನ್ನಾಗಿ ಮಾಡಿ ಮಂಡಳಿಯನ್ನು ಕೆಳದರ್ಜೆಗೆ ಇಳಿಸಿದೆ. ಇಲ್ಲಿಯವರೆಗೆ ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡದೇ ಮಂಡಳಿಯ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಈ ಭಾಗದ ಅಭಿವೃದ್ದಿಗೆ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಿದರು.

ಶಿವಕುಮಾರ್ ಯಾದವ್, ವೀರೇಶ ಹೀರಾ, ಮಹ್ಮದ್ ರಫಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.