ಮಂಗಳವಾರ, ಅಕ್ಟೋಬರ್ 26, 2021
26 °C

ಬಸ್‌ಪಾಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ತಾಲ್ಲೂಕಿನಲ್ಲಿ ಶಾಲಾ, ಕಾಲೇಜು ಆರಂಭಗೊಂಡು ಮೂರು ತಿಂಗಳಾದರು ಕೂಡ ಸಾರಿಗೆ ಸಂಸ್ಥೆ ಬಸ್‍ ಪಾಸ್‍ ಸೌಲಭ್ಯ ಕಲ್ಪಿಸಲು ಮೀನಾಮೇಷ ನಡೆಸುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‍ (ಎಸ್‍ಎಫ್‍ಐ) ನೇತೃತ್ವದಲ್ಲಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದರು.

ಮಂಗಳವಾರ ಸ್ಥಳೀಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತ ಸಾರಿಗೆ ಘಟಕವರೆಗೆ ಸಾಗಿಬಂದರು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಶಾಲಾ ಕಾಲೇಜು ಮಕ್ಕಳಿಗೆ ನೀಡಬಹುದಾದ ಬಸ್‌ಪಾಸ್‍ ಸೌಲಭ್ಯ ಕಲ್ಪಿಸಲು ಯಾವುದೇ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ಹಳೆ ಪಾಸ್‍ ಬಳಸಿ ತಿರುಗಾಡಲು ಅನುಮತಿ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿತ್ಯ ದೂರದ ಗ್ರಾಮಗಳಿಂದ ಹಣ ಖರ್ಚು ಮಾಡಿ ಶಾಲಾ ಕಾಲೇಜಿಗೆ ಬರಲು ಆಗದೆ ಶೈಕ್ಷಣಿಕವಾಗಿ ಸಂಕಷ್ಟ ಎದುರಿಸುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ಬಸ್‍ ಸಂಚಾರ ಕಲ್ಪಿಸದೆ ಹೋಗಿದ್ದರಿಂದ ಖಾಸಗಿ ವಾಹನಗಳಲ್ಲಿ ಬಂದು ಹೋಗುವಂತಾಗಿದೆ. ಹೀಗಾಗಿ ವಿದ್ಯಾರ್ಥಿ ಸಮೂಹ ಭಾರಿ ತೊಂದರೆ ಅನುಭವಿಸುತ್ತಿದ್ದೇವೆ. ಹೊಸದಾಗಿ ಪಾಸ್‍ ನೀಡುವವರೆಗೆ ಹಳೆ ಪಾಸ್‍ ಮತ್ತು ಶಾಲೆ ರಸೀದಿ ಮಾನ್ಯ ಮಾಡಬೇಕು‘ ಎಂದು ಒತ್ತಾಯಿಸಿದರು.

ಮುಖಂಡರಾದ ತಿಪ್ಪಣ್ಣ ನಿಲೋಗಲ್‍, ಪ್ರಲ್ಹಾದ, ರಮೇಶ, ಮಲ್ಲೇಶ, ಮೊಹ್ಮದ ಅನೀಫ್‍, ಅಮರೇಶ, ಸೂಗೂರೇಶ, ಹನುಮಂತ, ಪಾರ್ವತಿ, ಅಂಬಮ್ಮ, ಸರಸ್ವತಿ, ಪಾತಿಮಾ, ಬೇಬಿ, ಹುಲಿಗೆಮ್ಮ, ಅನುಸೂಯಾ, ಅಮರಮ್ಮ, ಲಕ್ಷ್ಮಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.