ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ(ಟಿಎಲ್‍ಬಿಸಿ) ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲ್ಲೂಕಿನ ಕೊನೆಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ಆಗಸ್ಟ್ 25 ರಿಂದ ಮೂರು ದಿನ ಸಿರವಾರ ತಾಲ್ಲೂಕಿನಲ್ಲಿ ರೈತರು ಹಾಗೂ ಪಕ್ಷಾತೀತವಾಗಿ ಅನಿರ್ದಿಷ್ಟ ಹೋರಾಟ, ರಸ್ತೆ ತಡೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ತಿಳಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‍ಬಿಸಿ) ಮಾನ್ವಿ, ಸಿರವಾರ ಹಾಗೂ ರಾಯಚೂರು ತಾಲ್ಲೂಕಿನ ಕೊನೆಭಾಗದ ರೈತರಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈಚೆಗೆ ನೀರು ಹರಿಸುವಂತೆ ಸಿರವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಹೀಗಾಗಿ ರಸ್ತೆ ತಡೆ ಮಾಡಲಾಗುತ್ತಿದೆ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಟಿಎಲ್‍ಬಿಸಿ ಕೊನೆಭಾಗದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆ ಮಾಡುವಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಟಿಎಲ್‍ಬಿಸಿ ನೀರು ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಅವರು ಟಿಎಲ್‍ಬಿಸಿಯ 47ನೇ ಮೈಲ್‍ನಲ್ಲಿ 11.5ಅಡಿ ನೀರು ಗೇಜ್ ನಿರ್ವಹಣೆಗೆ ಸೂಚನೆ ನೀಡಿದರೂ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಪ್ರಾದೇಶಿಕ ಆಯಕ್ತರಿಗೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ದೂರಿದರು.
ಟಿಎಲ್‍ಬಿಸಿಯ ಮೇಲ್ಭಾಗ ಅಧಿಕಾರಿಗಳು ಕೊನೆಭಾಗಕ್ಕೆ ನೀರು ಹರಿಸಲು ಸಹಕಾರ ನೀಡುತ್ತಿಲ್ಲ. ಮೇಲ್ಭಾಗದ ಜನಪ್ರತಿನಿಧಿಗಳೇ ಅಕ್ರಮ ನೀರಾವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಹಿಂದೆ ಟಿಎಲ್‍ಬಿಸಿ ಕೊನೆಭಾಗದ ರೈತರೊಂದಿಗೆ ಹೋರಾಟ ನಡೆಸಿದಾಗ ಕನಕಗಿರಿ ಶಾಸಕ ದೊಡ್ಡಬಸವರಾಜ ಅವರ ಬೆಂಬಗಲಿಗರು ಕಲ್ಲು ತೂರಾಟ ನಡೆಸಿದ್ದರು. ಅಲ್ಲಿನ ಎಲ್ಲ ಹಾಲಿ ಶಾಸಕರು ಅಕ್ರಮ ನೀರಾವರಿಗೆ ಬೆಂಬಲಿಸುತ್ತಿದ್ದಾರೆ ಎಂದು ಆಪಾದಿಸಿದರು.
ಜಿಲ್ಲಾಧಿಕಾರಿಗಳ ದಾಖಲೆ ಪ್ರಕಾರ ಟಿಎಲ್‍ಬಿಸಿಗೆ 4200 ಕ್ಯುಸೆಕ್ ದಾಖಲಾಗಿದೆ. ಆದರೆ, ಅಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆಯಾಗುತ್ತಿದ್ದರೆ, ಕೊನೆ ಭಾಗದ ರೈತರಿಗೆ ಯಾಕೆ ನೀರು ದೊರಕುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ದಾಖಲೆಗಳಲ್ಲಿ ಮಾತ್ರ ನೀರಿನ ಪ್ರಮಾಣವಿದೆ. ಆದರೆ, ರೈತರ ಜಮೀನುಗಳಿಲ್ಲ ಎಂದು ಟೀಕಿಸಿದರು.
ಹಿರಿಯ ಮುಖಂಡ ಹರವಿ ಶಂಕರಗೌಡ ಮಾತನಾಡಿ, ಟಿಎಲ್‍ಬಿಸಿಯಲ್ಲಿ ಹಳೆಯ ಗೇಜ್‍ಗಳಿದ್ದು, ಸರಿಯಾದ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. 69ನೇ ಮೈಲ್‍ನಲ್ಲಿ ತಪ್ಪು ಮಾಹಿತಿಯನ್ನು ದಾಖಲಿಸಲಾಗುತ್ತಿದೆ. ಆದರೆ, 7.5 ಅಡಿಯಷ್ಟು ನೀರು ಬರುವುದಿಲ್ಲ. ಇದರಿಂದ ಕೊನೆ ಭಾಗದರ ರೈತರ ನೀರು ದೊರಕುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಜೆ.ಶರಣಪ್ಪಗೌಡ, ಚಿಕ್ಕಿಸುಗೂಪ್ಪ, ಅಮರೇಶ ಹೊಸಮನಿ, ವೈ.ಬಸವರಾಜ ಬಲ್ಲಟಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.