ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಪಿಎಸ್‌: ಬೇಡಿಕೆಯಷ್ಟು ಕಲ್ಲಿದ್ದಲು ಪೂರೈಕೆ

ವೈಟಿಪಿಎಸ್‌ನಲ್ಲೂ 20 ಸಾವಿರ ಮೆ.ಟನ್‌ ದಾಸ್ತಾನು; ಅಧಿಕಾರಿಗಳ ಮಾಹಿತಿ
Last Updated 8 ಅಕ್ಟೋಬರ್ 2021, 21:03 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್‌)ದ ಎಂಟು ಘಟಕಗಳ ಪೈಕಿ ನಾಲ್ಕರಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ನಿತ್ಯ 10–12 ಸಾವಿರ ಟನ್‌ ಕಲ್ಲಿದ್ದಲು ಪೂರೈಕೆ ಆಗುತ್ತಿದೆ.

‘ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಅಭಾವ ಕಾಣಿಸಿಕೊಂಡಿಲ್ಲ. ರಾಜ್ಯದಲ್ಲಿ ಮಳೆ ಕಡಿಮೆಯಾದರೆ ಮಾತ್ರ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಒತ್ತಡ ಬರುತ್ತದೆ. ಕಲ್ಲಿದ್ದಲು ಕೊರತೆ ಆತಂಕ ಇನ್ನೂ ಎದುರಾಗಿಲ್ಲ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ. ವೆಂಕಟಚಲಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಂಟು ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಆರಂಭಿಸಿದರೆ ನಿತ್ಯ 25 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಉರಿಸಬೇಕಾಗುತ್ತದೆ. ಕಲ್ಲಿದ್ದಲು ವಿಭಾಗದಲ್ಲಿ 12 ಸಾವಿರ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ನಿತ್ಯ, ತೆಲಂಗಾಣದ ಸಿಂಗರೇಣಿ ಮತ್ತು ಮಹಾರಾಷ್ಟ್ರದ ವೆಸ್ಟರ್ನ್‌ ಕೋಲ್‌ ಫೀಲ್ಡ್ ಕಂಪನಿಯ ಕಲ್ಲಿದ್ದಲು ಗಣಿಗಳಿಂದ ನಾಲ್ಕು ರೇಕ್‌ (59 ಸರಕು ಸಾಗಣೆ ಬೋಗಿಗಳಿಗೆ ಒಂದು ರೇಕ್‌) ಕಲ್ಲಿದ್ದಲು ಬರುತ್ತಿದೆ.

ಆರ್‌ಟಿಪಿಎಸ್‌ ಎಂಟು ಘಟಕಗಳಿಂದ 1,720 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈಗ ನಾಲ್ಕು ಘಟಕಗಳಿಂದ 625 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಶಕ್ತಿನಗರ ಪಕ್ಕದಲ್ಲೇ ಇರುವ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ವೈಟಿಪಿಎಸ್‌)ದಲ್ಲಿ ಎರಡು ಘಟಕಗಳಿದ್ದು, 1,600 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಮೊದಲ ಘಟಕ ಕಾರ್ಯ ನಿರ್ವಹಿಸುತ್ತಿದ್ದು 643 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ವೈಟಿಪಿಎಸ್‌ನಲ್ಲಿ 20 ಸಾವಿರ ಮೆಟ್ರಿಕ್‌ ಟನ್‌ ಕಲ್ಲಿದ್ದಲು ಸಂಗ್ರಹವಿದೆ.

‘ದೇಶದ ಕಲ್ಲಿದ್ದಲು ಗಣಿಗಳಿರುವ ಕಡೆ ಮಳೆ ಆಗುತ್ತಿರುವುದರಿಂದ ಪೂರೈಕೆಯಲ್ಲಿ ಸಮಸ್ಯೆ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆರ್‌ಟಿಪಿಎಸ್‌, ವೈಟಿಪಿಎಸ್‌ನಲ್ಲಿ ಇದುವರೆಗೂ ಕಲ್ಲಿದ್ದಲು ಕೊರತೆ ಎದುರಾಗಿಲ್ಲ’ ಎನ್ನುವುದು ಈ ಸಂಸ್ಥೆಗಳ ಮಾಹಿತಿ.

‘ನಮ್ಮ ಸ್ಥಾವರಕ್ಕೂ ಪ್ರತಿದಿನ ಎರಡು ರೇಕ್‌ ಕಲ್ಲಿದ್ದಲು ಬರುತ್ತಿದೆ. ಹಬ್ಬದ ದಿನಗಳಲ್ಲಿ ಕಾರ್ಖಾನೆಗಳಿಗೆ ರಜೆ ಇರುವುದರಿಂದ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿರುವುದಿಲ್ಲ’ ಎಂದು ವೈಟಿಪಿಎಸ್‌ ಯೋಜನಾ ನಿರ್ದೇಶಕ ರಮೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT