ರಾಯಚೂರು: ‘ಅಧಿಕಾರ, ಅವಕಾಶ ಮತ್ತು ಹಣದ ಸಮಾನ ಹಂಚಿಕೆಯಾಗಬೇಕು ಎನ್ನುವುದು ಸ್ತ್ರೀವಾದಿ ಆಡಳಿತದ ಮಾದರಿ. ಇದು ಜಾರಿಯಾದರೆ ಮಹಿಳಾ ತಾರತಮ್ಯವಿಲ್ಲದ, ವೈಶಿಷ್ಟ್ಯ ಪೂರ್ಣವಾದ ಸಮಾಜ ನಿರ್ಮಾಣವಾಗುವುದು’ ಎಂದು ಶಿವಮೊಗ್ಗದ ಚಿಂತಕಿ ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಮಹಿಳಾ ಅಧ್ಯಯನ ವಿಭಾಗ ಮತ್ತು ಸಮಾಜಶಾಸ್ತ್ರ ವಿಭಾಗಗಳು ಸೋಮವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ ಮಹಿಳೆ: ಸಾಮಾಜಿಕ ಸ್ತರವಿನ್ಯಾಸ’ ಕುರಿತು ವಿಷಯ ಮಂಡಿಸಿ ಅವರು ಮಾತನಾಡಿದರು.

‘ಸ್ತ್ರೀವಾದಿ ಗಂಡಸುತನ ಅಪೂರ್ವವಾದುದು. ಆಡಳಿತ, ಅಧಿಕಾರ ಬಿಟ್ಟುಕೊಟ್ಟು ಸಂಬಂಧವನ್ನು ಉಳಿಸಿಕೊಳ್ಳಲು ಅದು ಪ್ರೇರೇಪಿಸುತ್ತದೆ. ಪುರುಷರು ಮತ್ತು ಮಹಿಳೆಯರು ಕುಟುಂಬ, ಸಮಾಜದಿಂದ ಈಗಾಗಲೇ ಹಂಚಿಕೆಯಾದ ಕೆಲಸಗಳನ್ನು ಬಿಟ್ಟು, ಅವುಗಳನ್ನು ತಮಗೆ ಬೇಕಾದಂತೆ ಮರು ಹಂಚಿಕೆ ಮಾಡಿಕೊಂಡು ಅಹಂನ್ನು ತ್ಯಜಿಸಬೇಕು. ಆಗ ಪ್ರೀತಿಯನ್ನು ಆಧರಿಸಿದ ಸ್ವಗೌರವದ ಬದುಕು ಎಲ್ಲರದೂ ಆಗುತ್ತದೆ’ ಎಂದರು.

‘ಪಿತೃಪ್ರಧಾನ ವ್ಯವಸ್ಥೆ ಮಹಿಳೆಯರನ್ನು ಹಲವು ವಿಧಗಳಲ್ಲಿ ನಿಯಂತ್ರಿಸುತ್ತದೆ. ಮುಖ್ಯವಾಗಿ ಮಹಿಳೆಯ ಚಲನೆ, ದುಡಿಮೆಯ ಗಳಿಕೆ ಮೇಲೆ ನಿಯಂತ್ರಣ, ಲೈಂಗಿಕತೆಯ ಮೇಲೆ ನಿಯಂತ್ರಣವನ್ನು ಮಾಡುತ್ತದೆ. ಈ ರೀತಿಯ ನಿಯಂತ್ರಣಗಳನ್ನು ಹೇರುವ ಮೂಲಕ ಅಧಿಕಾರವನ್ನು ಉಳಿಸಿಕೊಳ್ಳಲು ಸಂಚು ಮಾಡುತ್ತದೆ’ ಎಂದು ವಿಶ್ಲೇಷಿಸಿದರು.

ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥ ಶೈಲಜಾ ಇಂ.ಹಿರೇಮಠ ಅವರು ‘ವಸಾಹತುಶಾಹಿ ಭಾರತದಲ್ಲಿನ ಸುಧಾರಣಾವಾದ ಮತ್ತು ಮಹಿಳೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ನವಪಿತೃತ್ವವ ಸ್ಥಾಪಿಸಿದ ಆಧುನಿಕ ಪುರುಷರು:

‘ವಸಾಹತುಶಾಹಿ ಆಡಳಿತದ ಆರಂಭದ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಕಾಳಜಿಯ ಹಿಂದೆ ಪುರುಷ ಪ್ರಧಾನ ವ್ಯವಸ್ಥೆಯ ಸಂಚಿದೆ. ಆಧುನಿಕ ಭಾರತದ ಪುರುಷರಿಗೆ ಸುಧಾರಿತ ಹೆಂಡತಿಯನ್ನು ರೂಪಗೊಳಿಸುವ ಏಕಮಾತ್ರ ಉದ್ದೇಶವಿತ್ತು. ಈ ಸಮಾಜಕ್ಕೆ ಪ್ರಬುದ್ಧ ಮಹಿಳೆಯರು ಬೇಡವಾಗಿದೆ. ಪ್ರಜ್ಞಾವಂತ ಮಹಿಳೆಯರನ್ನು ಒಪ್ಪಿಕೊಳ್ಳುವುದಿಲ್ಲ. ಈ ಸುಧಾರಣಾವಾದ ಮಹಿಳೆಯನ್ನು ದೇವಿಯಾಗಿ ಕಾಣುತ್ತದೆ. ಮಾತೃತ್ವ, ನಾರೀತನವನ್ನು ಪುನರುಜ್ಜೀವನಗೊಳಿಸುತ್ತ ಹೋಗುತ್ತದೆ. ಹಾಗಾಗಿ ಅದನ್ನು ಸಾಮಾಜಿಕ ಸಂಕಷ್ಟಗಳ ವಿಮೋಚನೆಯ ಹಾದಿ ಎಂದು ಭಾವಿಸಲಾಗದು. ಅದು ನವಪಿತೃತ್ವವನ್ನು ಸ್ಥಾಪಿಸಿತು’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ‘ಮಹಿಳೆಯನ್ನು ರೂಪಿಸಲಾಗಿದೆ, ರಚಿಸಲಾಗಿದೆ. ಸ್ಮೃತಿಗಳು ಮಹಿಳೆಯರು ಹೇಗೆ ಜೀವಿಸಬೇಕು, ನಡೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತವೆ. ಸಂಸ್ಕೃತಿಯ ಹೆಸರಿನಲ್ಲಿ ಆಕೆಯನ್ನು ಬಂಧನದಲ್ಲಿಡಲಾಗುತ್ತಿದೆ. ಕುಟುಂಬದ ನ್ಯಾಯಾಧೀಕರಣ, ಯಜಮಾನಿಕೆ ಈಗಲೂ ಪುರುಷರ ಕೈಯ್ಯಲ್ಲಿದೆ. ಹೆಣ್ಣು ಹುಟ್ಟಿದರೆ ದುಃಖಿಸುವ, ಗಂಡು ಹುಟ್ಟಿದರೆ ಸಂಭ್ರಮಿಸುವ ವಾತಾವರಣ ಇನ್ನೂ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕುಲಸಚಿವ (ಆಡಳಿತ) ಡಾ. ಎ.ಚೆನ್ನಪ್ಪ, ಸಮಾಜ ವಿಜ್ಞಾನಗಳ ನಿಕಾಯದ ಡೀನ್ ಕೆ.ವೆಂಕಟೇಶ್, ಎನ್ಎಸ್ಎಸ್ ಸಂಯೋಜನಾಧಿಕಾರಿ ಜಿ.ಎಸ್.ಬಿರಾದಾರ ಉಪಸ್ಥಿತರಿದ್ದರು.

ಮಹಿಳಾ ಅಧ್ಯಯನ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎಸ್.ಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸ್ನೇಹಾ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕ ಮೇಘನಾ ಜಿ. ನಿರೂಪಿಸಿದರು. ಭೀಮೇಶ ಮಾಚನೂರು ಸ್ವಾಗತಿಸಿದರು. ಅನಿಲಕುಮಾರ ಎಂ. ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.