ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯಕ್ಕೆ ಪಟ್ಟು: ಶಾಲೆಗೆ ಬಾರದ ಮಕ್ಕಳು

‘ಶಾಲೆಗೆ ಬನ್ನಿ’ ಎಂದು ವಿದ್ಯಾರ್ಥಿಗಳ ಮನೆಬಾಗಿಲಿಗೆ ಅಧಿಕಾರಿಗಳು
Published 15 ಸೆಪ್ಟೆಂಬರ್ 2023, 14:44 IST
Last Updated 15 ಸೆಪ್ಟೆಂಬರ್ 2023, 14:44 IST
ಅಕ್ಷರ ಗಾತ್ರ

ಊಟಿ : ಪ್ರಭಾರ ಮಖ್ಯ ಶಿಕ್ಷಕರ ಅಮಾನತು ಆದೇಶ ಹಿಂಪಡೆಯಬೇಕು ಹಾಗೂ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಪಟ್ಟು ಹಿಡಿದ ವಿದ್ಯಾರ್ಥಿಗಳು ವಾರದಿಂದ ಶಾಲೆಗೆ ಬಾರದೇ ಮನೆಯಲ್ಲಿ ಕುಳಿತ ಪರಿಣಾಮ ಊಟಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿ ಶಾಲೆ ಬಂದ್‌ ಆಗಿದೆ.

ಈ ನಡುವೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ’ಶಾಲೆಗೆ ಬನ್ನಿ’ ಎಂದು ವಿದ್ಯಾರ್ಥಿಗಳ ಮನೆಗೆ ಬಾಗಿಲಿಗೆ ಎಡತಾಕುವ ಸ್ಥಿತಿ ಬಂದೊಂದಗಿದೆ.

ಪ್ರತಿಭಟನೆ ಏಕೆ: ಪಲಕನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಊಟಿ ಗ್ರಾಮದಲ್ಲಿ‌ ಈಚೆಗೆ ಶಾಲೆಯ ಮಕ್ಕಳ ಹಾಗೂ ಪಾಲಕರು ಸೇರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲು ಅನುದಾನದ ವ್ಯವಸ್ಥೆ ಮಾಡುವಂತೆ ಚಿನ್ನದ ಗಣಿಯ ಸಂಸ್ಥೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆಯಲ್ಲಿ ಮಕ್ಕಳನ್ನು ಭಾಗವಹಿಸಲು ಬಿಟ್ಟಿರುವ ಕಾರಣದಿಂದ ಇಲಾಖೆಯ ಜಿಲ್ಲಾ ಉಪ‌ ನಿರ್ದೇಶಕರು ಪ್ರಭಾರ ಮುಖ್ಯ ಶಿಕ್ಷಕ ದೇವರೆಡ್ಡಿ ಅವರನ್ನು ಅಮಾನತು ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಪಾಲಕರು ಒಂದು ವಾರದಿಂದ ತಮ್ಮ ಮಕ್ಕಳನ್ನು ಶಾಲೆಗೆ‌ ಕಳಿಸದೇ ಮನೆಯಲ್ಲಿ ಇರಿಸಿಕೊಂಡಿದ್ದಾರೆ.

ಪಾಲಕರಾದ ಅಮರೇಶ, ಗುಂಡಪ್ಪ ಅವರು ಮಾತನಾಡಿ, ‘ಗ್ರಾಮದ ಪಕ್ಕದಲ್ಲಿಯೇ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿದೆ. ಗಣಿಯ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡ ಕಾರಣ ನಿವೇಶನ ಖರೀದಿಗೆ ₹30 ಲಕ್ಷ ಅನುದಾನ ನೀಡಿದ್ದಾರೆ. ಅದು ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗೆ ಜಮೆ ಮಾಡಲಾಗಿದೆ. ಅಲ್ಲದೇ ಗ್ರಾಮಸ್ಥರಲ್ಲಿಯೇ ಒಬ್ಬ ಕೃಷಿಕರು ತಮ್ಮ ಜಮೀನು ನೀಡಲು‌ ಮುಂದೆ ಬಂದಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶೀಘ್ರವೇ ಪೂರ್ಣಗೊಳಿಸಬಹುದಾಗಿತ್ತು. ಇದಷ್ಟೇ ಅಲ್ಲದೇ ಪ್ರಭಾರ ಮುಖ್ಯಶಿಕ್ಷಕರನ್ನೂ ಅಮಾನತು ಮಾಡಲಾಗಿದೆ. ಇದು ಖಂಡನೀಯ‘ ಎಂದರು.

ಹೇಗಿದೆ ಶಾಲೆ: ’ಶಾಲೆಯಲ್ಲಿ ಎರಡು ಕೋಣೆಗಳು ಮಾತ್ರ ಚನ್ನಾಗಿವೆ. ಉಳಿದ ಎರಡು ಕೋಣೆಗಳು ಹಾಳಾಗಿವೆ. 1ರಿಂದ 8ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುವ 204 ಮಕ್ಕಳ ಇಲ್ಲಿದ್ದಾರೆ. 11 ಶಿಕ್ಷಕರ ಮಂಜುರಾತಿ ಇದ್ದರೂ ಸಹ ಕೆವಲ ನಾಲ್ಕೂ ಜನ ಶಿಕ್ಷಕರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಶಾಲೆಯಲ್ಲಿ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲವಾಗಿದೆ. ಯಾವ ಉದ್ದೇಶಕ್ಕೆ ನಮ್ಮ ಮಕ್ಕಳನ್ನು ನಿಮ್ಮ ಶಾಲೆಗೆ ಕಳಿಸಬೇಕು‘ ಎಂದು ಪ್ರಶ್ನೆ ಮಾಡಲಾಗಿದೆ ಎಂದರು.

ಕಳಿಸಲು ನಕಾರ: ವಿದ್ಯಾರ್ಥಿಗಳ ಮನೆ, ಮನೆಗೆ ಭೇಟಿ ನೀಡಿ‌ದ ಇಲಾಖೆಯ ಅಧಿಕಾರಿಗಳಿಗೆ ಆಕ್ರೋಶದ ಮಾತುಗಳೇ ಸಿಕ್ಕಿವೆ. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದೂ ಸ್ಪಷ್ಟವಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ತಿಳಿಸಿದ್ದಾರೆ.

’ಅಮಾನತುಕೊಂಡ ಶಿಕ್ಷಕ ದೇವರೆಡ್ಡಿ ಅವರನ್ನು ಮರಳಿ ಶಾಲೆಗೆ‌ ನಿಯೋಜನೆ ಮಾಡಬೇಕು. ಶಾಲಾ ಕಟ್ಟಡಕ್ಕೆ ನಿವೇಶನದ ವ್ಯವಸ್ಥೆಗೆ ಅಧಿಕಾರಿಗಳು ಗಮನ ಹರಿಸಬೇಕು. ಶಾಲೆಯಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುದಿಲ್ಲ’ ಎಂದು ತಿಳಿಸಿದರು.

ಮಕ್ಕಳ ಮನೆಗಳಿಗೆ ಭೇಟಿ: ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಿವುರಾಜ ನಾಯಕ ಪೂಜಾರಿ, ಕವಡಿಮಠ, ವೆಂಕಟಚಲಪತಿ, ಮುದ್ದಕಣ್ಣ, ಕೃಷ್ಣ ಮೂರ್ತಿ ನಾಯಕ, ಸೋಮಶೇಖರ್ ನಾಯಕ, ಶಶಿಧರ್ ಭೇಟಿ ನೀಡಿ ಪಾಲಕರಿಗೆ ಮನವೊಲಿಸಿದರು.

ಊಟಿ ಗ್ರಾಮದ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ದೇವರೆಡ್ಡಿ ಅವರನ್ನು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಅಮಾನತು ಮಾಡಿದ್ದಾರೆ. ಸರಿಪಡಿಸಲು ಹಾಗೂ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ವಿನಂತಿಸಿಕೊಳ್ಳಲಾಗುವುದು. ಆದರೆ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ‌ ಕಳಿಸದೇ ಇರುವುದು ಸಮಸ್ಯೆಯಾಗಿದೆ.  ಪಾಲಕರು ಸಹಕರಿಸಬೇಕು. ಇಲ್ಲವಾದರೆ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಕಲಿಕೆಯಲ್ಲಿ‌ ಹಿಂದುಳಿಯುತ್ತಾರೆ. ಪಾಲಕರು ಸಮಸ್ಯೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.

ಸುಖದೇವ, ಕ್ಷೇತ್ರ ಶಿಕ್ಷಣಾಧಿಕಾರಿ ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT