ಶನಿವಾರ, ಸೆಪ್ಟೆಂಬರ್ 25, 2021
28 °C
ಬೆಟ್ಟದೂರು: ಕೃಷಿ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ ಕುರಿತು ಕಾರ್ಯಕ್ರಮ

ವೈಜ್ಞಾನಿಕ ಕೃಷಿಯಿಂದ ಭೂಮಿಗೆ ಮಾರಕ: ಸದಾನಂದ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಟ್ಟದೂರು (ಮಾನ್ವಿ): ‘ಆಧುನಿಕ ಹಾಗೂ ವೈಜ್ಞಾನಿಕ ಕೃಷಿ ಹೆಸರಿನ ಬೇಸಾಯ ಪದ್ದತಿಯಿಂದ ಕೃಷಿ ಭೂಮಿ ಮತ್ತು ಮನುಷ್ಯನ ಆರೋಗ್ಯ ಹಾಳಾಗುತ್ತಿದೆ’ ಎಂದು ಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಪೂಜಾರಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೆಟ್ಟದೂರು ಗ್ರಾಮದಲ್ಲಿ ಶನಿವಾರ ರಾಯಚೂರು ಕೃಷಿ ವಿಶ್ವವಿದ್ಯಾಲಯ, ಜನಶಿಕ್ಷಣ ಸಂಸ್ಥೆ ಮತ್ತು ಬೆಟ್ಟದೂರು ಬಯೋಟೆಕ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕೃಷಿ ಕ್ಷೇತ್ರದಲ್ಲಿ ಕೌಶಲಾಭಿವೃಧ್ದಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆಧುನಿಕ ಬೇಸಾಯ ಪದ್ಧತಿಯಲ್ಲಿ ಹೇರಳವಾಗಿ ರಸಗೊಬ್ಬರ, ಕ್ರಿಮಿ ನಾಶಕ ಬಳಕೆ ಮತ್ತು ಎಲ್ಲೆಡೆ ವ್ಯಾಪಿಸಿರುವ ಹೈಬ್ರಿಡ್ ಬೀಜ ಮಾರಕವಾಗಿವೆ.ಇವುಗಳನ್ನು ಬಿಟ್ಟು ಕೃಷಿಯೇ ಇಲ್ಲ ಎನ್ನುವಷ್ಟರ ಮಟ್ಟಗೆ ವ್ಯವಸ್ಥೆ ನಮ್ಮನ್ನು ಬಗ್ಗಿಸಿಬಿಟ್ಟಿದೆ. ಅಂಗವೈಕಲ್ಯ, ಮಾನಸಿಕ ನೆಮ್ಮದಿ ಇಲ್ಲದಿರುವಿಕೆ, ಮನುಷ್ಯನ ಜೀವಿತಾವಧಿ ಗಣನೀಯ ಇಳಿಕೆ ರಸಾಯನಯುಕ್ತ ಬೇಸಾಯದ ಫಲಗಳಾಗಿವೆ’ ಎಂದರು.

‘ಮಣ್ಣಿನ ಫಲವತ್ತತೆ ಹೆಚ್ಚಿಸಲು ಎರೆಹುಳು, ಕಾಂಪೋಸ್ಟ್ ಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ಕೊಡಬೇಕು. ಇವುಗಳಲ್ಲಿ ಎನ್.ಪಿ.ಕೆ ಮತ್ತು ಸೂಕ್ಷ್ಮ ಪೋಷಕಾಂಶಗಳು ಅಧಿಕವಾಗಿರುತ್ತವೆ. ಬೆಟ್ಟದೂರು ಬಯೋಟೆಕ್‍ಸಂಸ್ಥೆಯವರು ಸಾವಯವ ಗೊಬ್ಬರ ಮತ್ತು ಸಾವಯವ ಮೈಕ್ರೋನ್ಯೂಟ್ರಿಯಂಟ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ರೈತರು ಸ್ವತ: ತಾವೇ ತಯಾರಿಸಬಹುದು ಇಲ್ಲವೆ ತಯಾರಕರಿಂದ ಕೊಂಡುಕೊಳ್ಳ ಬಹುದು’ ಎಂದು ಸಲಹೆ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ಡಾ.ಸೌಮ್ಯ ಮಾತನಾಡಿ, ಹೆಚ್ಚು ಕೆಮಿಕಲ್, ರಸಾಯನಿಕ ಗೊಬ್ಬರ ಬಳಕೆ ಅಪಾಯಕಾರಿ ಮಟ್ಟ ಮೀರಿದೆ. ಹೆಚ್ಚು ಭತ್ತ ಮತ್ತು ಗೋಧಿ ಬೆಳೆಯುವ ಪಂಜಾಬಿನಲ್ಲಿ ಹೆಚ್ಚು ಕ್ಯಾನ್ಸರ್ ಪೀಡಿತರಿದ್ದಾರೆ. ಸಾವಯವ ಗೊಬ್ಬರ ಮಣ್ಣಿನ ರಚನೆ ಬದಲಿಸಿ ಫಲವತ್ತತೆ ಹೊಂದುವಂತೆ ಮಾಡುತ್ತದೆ. ಇದರಿಂದ ಮಣ್ಣು ಮತ್ತು ಮನುಷ್ಯ ನೆಮ್ಮದಿಯಿಂದ ಇರಬಹುದು’ ಎಂದು ಹೇಳಿದರು.

ಬೆಟ್ಟದೂರು ಬಯೋಟೆಕ್ ಸಂಸ್ಥೆಯ ಶರಣಬಸವ ಬೆಟ್ಟದೂರು ಮಾತನಾಡಿ, ‘ರೈತರನ್ನು ಸಾವಯವದ ಕಡೆಗೆ ಕೊಂಡೊಯ್ಯಲು ಸಂಸ್ಥೆ ಕೆಲಸ ಮಾಡುತ್ತಿದೆ. ಎರೆಹುಳ ಗೊಬ್ಬರ, ಸಾವಯವ ಗೊಬ್ಬರ ಮತ್ತು ಬೆಳೆವರ್ದಕ ಸಿಂಪಡಣೆ ಸಿದ್ದಪಡಿಸಲಾಗಿದೆ. ಈ ಉತ್ಪನ್ನಗಳು ಪರಿಣಾಮಕಾರಿಯಾಗಿದ್ದು ನಿರ್ಭಯದಿಂದ ಬಳಸಬಹುದಾಗಿದೆ’ ಎಂದರು.

ಭೂವಿಜ್ಞಾನಿ ಉಮಾಪತಿ ಬೆಟ್ಟದೂರು,ಎಂಜಿನಿಯರ್ ಚಾಮರಸ ಮಾತನಾಡಿದರು. ಎರೆಹುಳ ಗೊಬ್ಬರದ ಪಿಟ್ ರಚನೆ ಮತ್ತು ಗೊಬ್ಬರ ತಯಾರಿಕೆ ಕುರಿತು ಸೌಮ್ಯ ಅವರು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಈರಯ್ಯ ತಾತಾ, ಮಹಾಂತೇಶ ಜಮಖಂಡಿ, ಮಲ್ಲಿಕಾರ್ಜುನ ಸಜ್ಜಲ, ಚಂದ್ರಶೇಖರ ಮರ್ಚೇಡ್, ನಾಗಭೂಷಣ, ಮುಕ್ಕಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.