ಶನಿವಾರ, ಡಿಸೆಂಬರ್ 4, 2021
20 °C
ನೀರಮಾನ್ವಿ ಗ್ರಾಮದ ಉಪನ್ಯಾಸಕ ಬಂದಪ್ಪಗೌಡ ಆಸಕ್ತಿ

ರಾಯಚೂರು: ಕೃಷಿ ಜತೆಗೆ ಕುರಿ, ಕೋಳಿ ಸಾಕಣೆ

ಬಸವರಾಜ ಭೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ನೀರಮಾನ್ವಿ ಗ್ರಾಮದ ಉಪನ್ಯಾಸಕ ಬಂದಪ್ಪಗೌಡ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಮಾನ್ವಿ ಪಟ್ಟಣದ ವಿವಿಧ ಖಾಸಗಿ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುವ ಬಂದಪ್ಪಗೌಡ ತಮ್ಮ ಜಮೀನಿನಲ್ಲಿ ಸುಸಜ್ಜಿತ ಶೆಡ್ ನಿರ್ಮಿಸಿ ಕುರಿ ಹಾಗೂ ಕೋಳಿ ಸಾಕಣೆ ಮೂಲಕ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

6 ಎಕರೆ ಜಮೀನಿನಲ್ಲಿ ಶೇಂಗಾ, ಜೋಳ, ಸಜ್ಜೆ ಬೆಳೆದು ಕೃಷಿಯಲ್ಲಿ ಸಕ್ರೀಯರಾಗಿದ್ದ ಅವರು ಕಳೆದ ವರ್ಷ ಕುರಿ ಸಾಕಾಣಿಕೆ ಆರಂಭಿಸಿದ್ದರು. ಪಶುಪಾಲನಾ ಇಲಾಖೆಗೆ ತೆರಳಿ ವಿವಿಧ ತಳಿಯ ಕುರಿ, ಮೇಕೆಗಳ ಬಗ್ಗೆ ಮಾಹಿತಿ ಪಡೆದು ಕುರಿ ಸಾಕಾಣಿಕೆಯಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಅವರು 20 ಮೇಕೆ, ಕುರಿಗಳನ್ನು ಖರೀದಿಸಿದ್ದರು. ಈಗ ಅವರ ಶೆಡ್‍ನಲ್ಲಿ 60ಕ್ಕೂ ಅಧಿಕ ಕುರಿಗಳು ಇವೆ. ಕೋಳಿಗಳನ್ನು ಸಹ ಸಾಕಿದ್ದಾರೆ. ಪ್ರತಿ ವಾರ, ಹದಿನೈದು ದಿನಗಳಿಗೊಮ್ಮೆ ಮಾನ್ವಿ, ಸಿಂಧನೂರು, ಹೈದರಾಬಾದ್‌  ಮುಂತಾದ ನಗರಗಳ ವರ್ತಕರು ಇವರ ಕುರಿಗಳನ್ನು ಖರೀದಿಸಲು ಆಗಮಿಸುತ್ತಾರೆ.

‘ಕುರಿಗಳ ಆರೋಗ್ಯದ ಕಡೆಗೆ ಸದಾ ಗಮನ, ನಿರ್ವಹಣೆಗೆ ತಾಳ್ಮೆ, ಪರಿಶ್ರಮ ಅಗತ್ಯ. ಒಳ್ಳೆಯ ದರಕ್ಕೆ ಮಾರಾಟವಾಗುವುದರಿಂದ ಲಾಭ ಗಳಿಕೆ, ನಿರಂತರ ಆದಾಯ ಸಾಧ್ಯ’ ಎಂಬುದು ಬಂದಪ್ಪಗೌಡ ಅವರ ಅಭಿಪ್ರಾಯ.

ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಇವರ ವ್ಯಾಪಾರದ ಮೇಲೂ ಪರಿಣಾಮ ಬೀರಿತ್ತು. ಲಾಕ್ ಡೌನ್ ಸಡಿಲಿಕೆಯಾದ ನಂತರ ವ್ಯಾಪಾರ ಚೇತರಿಕೆ ಕಂಡಿದೆ.

ಬಂದಪ್ಪಗೌಡ ಅವರ ಕುರಿ ಸಾಕಾಣಿಕೆ ವೃತ್ತಿಯಿಂದ ಇತರ ಉಪನ್ಯಾಸಕರು ಪ್ರೇರಿತರಾಗಿದ್ದಾರೆ. ಖಾಸಗಿ ಕಾಲೇಜುಗಳ ಉಪನ್ಯಾಸಕರಾದ ಆಂಜನೇಯ ನಾಯಕ, ಮಹ್ಮದ್ ಹಬೀಬ್, ಎಚ್.ಚಂದ್ರಶೇಖರ ಹಾಗೂ ಬಿಲಾಲ್ ಒಟ್ಟುಗೂಡಿ ನಸಲಾಪುರ ಗ್ರಾಮದಲ್ಲಿ ಕುರಿ ಸಾಕಾಣಿಕೆ ಆರಂಭಿಸಿದ್ದಾರೆ. ಮಾನ್ವಿ ತಾಲ್ಲೂಕಿನಲ್ಲಿ ಖಾಸಗಿ ಕಾಲೇಜುಗಳ ಉಪನ್ಯಾಸಕರು ಸ್ವಾವಲಂಬನೆಗೆ ಪರ್ಯಾಯ ದಾರಿ ಕಂಡುಕೊಂಡಿರುವುದು ಮಾದರಿ ಕಾರ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು