ಮಸ್ಕಿ: ಶ್ರಾವಣಮಾಸದ ಮೊದಲ ಸೋಮವಾರ ಎರಡನೇ ಶ್ರೀಶೈಲ ಎಂದು ಪ್ರಸಿದ್ದಿ ಪಡೆದ ಪಟ್ಟಣದ ಬೆಟ್ಟದ ಮೇಲಿನ ಮಲ್ಲಯ್ಯನ ( ಮಲ್ಲಿಕಾರ್ಜುನ) ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂತು.
ಬೆಳಿಗ್ಗೆ ಮೂರು ಗಂಟೆಯಿಂದಲೇ ಕಲ್ಲಿನಲ್ಲಿ ಮೂಡಿರುವ ಮಲ್ಲಯ್ಯನಿಗೆ ಅರ್ಚಕರಿಂದ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮಂತ್ರ ಘೋಷಗಳೊಂದಿಗೆ ನಡೆದವು.
ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಅಗಮಿಸಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತಿ ಬೆಳಿಗ್ಗೆ 3 ರಿಂದಲೇ ಮಲ್ಯಯ್ಯ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದು ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಕಂಡು ಬಂತು.
ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ದರ್ಶನಕ್ಕೆ ಸಾಲುಗಟ್ಟಿ ಗಂಟೆಗಟ್ಟಲೇ ಕಾದು ದರ್ಶನ ಪಡೆದುಕೊಂಡರು.
ದೇವರ ದರ್ಶನಕ್ಕೆ ನೂಕು ನುಗ್ಗಲು ಆಗದಂತೆ ಮುಂಜಾಗೃತ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಮಾಡಿ ಸರದಿ ಮೇಲೆ ಭಕ್ತರನ್ನು ದೇವಸ್ಥಾನದ ಒಳಗೆ ಬಿಡುತ್ತಿದ್ದರು.
ಶ್ರಾವಣಮಾಸದ ಪ್ರತಿ ಸೋಮವಾರ ಸೇರಿದಂತೆ ಪ್ರತಿದಿನ ನೂರಾರು ಭಕ್ತರು ಬೆಟ್ಟ ಹತ್ತಿ ಮಲ್ಲಯ್ಯನಿಗೆ ಅರಿಕೆ ತೀರಿಸಿ ದರ್ಶನ ಪಡೆಯುತ್ತಿರುವುದು ವಾಡಿಕೆ. ಕೊನೆಯ ಸೋಮವಾರ ಮಲ್ಲಯ್ಯ ಜಾತ್ರೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಗಮಿಸಿ ದರ್ಶನ ಪಡೆಯುವ ಮೂಲಕ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.
ಎಲ್ಲಾ ಧರ್ಮ, ಜಾತಿಯ ಜನರು ಬೆಟ್ಟ ಹತ್ತಿ ಮಲ್ಲಯ್ಯನ ದರ್ಶನ ಪಡೆಯುತ್ತಿರುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ.
ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನ ಕಲ್ಲು ಶಿಲೆಗಳಿಂದ ಕೂಡಿದೆ. ಗಂಡಬೇರುಂಡ, ಎನ್ ಸಿ ಆರ್ ಟಿಯ ಲಾಂಛ, ಸೇರಿದಂತೆ ಅನೇಕ ಕಲಾಕೃತಿಗಳು ಭಕ್ತರ ಗಮನ ಸೆಳೆಯುತ್ತಿವೆ