ಸೋಮವಾರ, ಮೇ 17, 2021
29 °C

ದೆಹಲಿ ಗಲಭೆ ಸೃಷ್ಠಿಸಿದವರ ಮೇಲೆ ಕ್ರಮಕ್ಕೆ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ. Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೆಹಲಿಯಲ್ಲಿ ನಡೆದ ಹಿಂಸೆಗೆ ಪ್ರಚೋದನೆ ನೀಡಿದವರನ್ನು, ಗಲಭೆಕೋರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಬಾಧಿತರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆಯಿಂದ ಮುಖಕ್ಕೆ ಕಪ್ಪುಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ರವಾನಿಸಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಪಿಸ್ತೂಲ್ ಹಾಗೂ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ, ಕೊಲೆ ಮಾಡಿದ್ದು ಅಮಾನವೀಯ. ಅಲ್ಪಸಂಖ್ಯಾತರ ಅಂಗಡಿ, ಮುಂಗಟ್ಟು,ಮನೆ, ಮಸೀದಿಗಳನ್ನು ಬೆಂಕಿ ಹಚ್ಚಿ ಆಸ್ತಿಪಾಸ್ತಿ ಹಾನಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದು ಖೇದಕರ ಸಂಗತಿ ಎಂದು ದೂರಿದರು.

ದೆಹಲಿಯ ಗಲಭೆಯಲ್ಲಿ 38ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಲಭೆಯನ್ನು ತಡೆಯಬೇಕಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿ ಗಲಭೆಕೋರರಿಗೆ ಬೆಂಬಲ ನೀಡಿದ್ದಾರೆ. ಘಟನೆಯ ಬಗ್ಗೆ ವರದಿ ಮಾಡಲು ಹೊರಟಿದ್ದ ಪತ್ರಕರ್ತರ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಗಲಭೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಪಿಲ್ ಮಿಶ್ರ ಪ್ರಚೋದನಾತ್ಮಕ ಹೇಳಿಕೆಗಳೇ ಕಾರಣ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ  ದೆಹಲಿಯ ಹೈಕೋರ್ಟ್ ನ್ಯಾಯಾಧೀಶ ಮುರಳಿಧರ್ ಅವರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಗಲಭೆಯ ಹಿಂದಿರುವ ಅನುಮಾನ ವ್ಯಕ್ತವಾಗಿದೆ ಎಂದು ದೂರಿದರು.

ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸಿದ್ದರೂ ಕೂಡ ಪ್ರಧಾನಿ ಮೋದಿ ನೊಂದವರಿಗೆ ಸಾಂತ್ವನ ನೀಡಿಲ್ಲ. ಹೋರಾಟವನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಗಲಭೆಯ ನಡುವೆಯ ಕೆಲ ಮುಸ್ಲಿಂ, ಹಿಂದು ಪರಸ್ಪರ ಸಹಕಾರಕ್ಕೆ ಬಂದು ಸೌಹಾರ್ಧತೆ ಕಾಪಾಡುತ್ತಿದ್ದು, ಗಲಭೆಗೆ ಕಾಯ್ದೆಯ ಪರ ಹಿಂಸಾತ್ಮಕ ಹೋರಾಟಗಾರರೇ ಕಾರಣ ಅವರನ್ನು ಪತ್ತೆ ಹಚ್ಚಿ ನಷ್ಟದ ಹಾನಿ ಭರಿಸಿ ಉಗ್ರ ಶಿಕ್ಷೆಗೊಳಪಡಿಸಬೇಕು. ದೇಶದ ಜನರ ಅಭಿಪ್ರಾಯಕ್ಕೆ ಮಣಿದು ಕೇಂದ್ರ ಸರ್ಕಾರ ವಿವಾದಿತ ಕಾಯ್ದೆ ವಾಪಸ್ ಪಡೆಯಲು ಮಧ್ಯ ಪ್ರವೇಶ ಮಾಡಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಹೋರಾಟಗಾರರಾದ ಜಿ.ಅಮರೇಶ, ಜಾನ್ ವೆಸ್ಲಿ, ಖಾಜಾ ಅಸ್ಲಮ ಪಾಷ, ಮಹಮ್ಮದ್ ಎಕ್ಬಾಲ್, ಜೆ.ಬಿ.ರಾಜು, ಎಮ್.ಆರ್.ಭೇರಿ, ಸಿರಾಜ್ ನಾಯ್ಕ್, ರವಿದಾದಸ್, ಸಲ್ಮಾ ಖಾನಂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು