ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ಆಮೆಗತಿಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆ ಕಾಮಗಾರಿ

Published 27 ಜೂನ್ 2024, 5:42 IST
Last Updated 27 ಜೂನ್ 2024, 5:42 IST
ಅಕ್ಷರ ಗಾತ್ರ

ಸಿಂಧನೂರು: ನಗರದಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾದ ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಮಹಿಳೆಯರ ಬಹುದಿನಗಳ ಕನಸು ನನಸಾಗದೆ ಉಳಿದಿರುವುದು ವಿಪರ್ಯಾಸದ ಸಂಗತಿ.

ತಾಲ್ಲೂಕು ಆಸ್ಪತ್ರೆಯಿಂದ ತಾಯಿ-ಮಕ್ಕಳ ಆಸ್ಪತ್ರೆ ಪ್ರತ್ಯೇಕವಾಗಿದ್ದರೆ ವ್ಯವಸ್ಥಿತವಾಗಿ ಗರ್ಭಿಣಿಯರ, ತಾಯಂದಿರ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಅತ್ಯಂತ ಅನೂಕುಲವಾಗುತ್ತದೆ ಎನ್ನುವ ಉದ್ದೇಶ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಉದಾಸೀನತೆಯಿಂದ ಕೈಗೂಡದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ, ಮಹಿಳಾ ಬಸವಕೇಂದ್ರದ ಸುಮಂಗಲಾ ಚಿಂಚಿರಕಿ ಬೇಸರ ವ್ಯಕ್ತಪಡಿಸಿದರು.

ತಾಯಿ-ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಯಾವ ಜಾಗದಲ್ಲಿ ನಿರ್ಮಿಸಬೇಕು ಎನ್ನುವುದೇ ತಾಲ್ಲೂಕಿನಲ್ಲಿ ವಿವಾದವಾಗಿತ್ತು. ಆಗ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಕಲ್ಲೂರು ಗ್ರಾಮದ ಸ್ಮಶಾನದ ಪಕ್ಕದಲ್ಲಿ ಆಸ್ಪತ್ರೆ ನಿರ್ಮಿಸಲು ಎಲ್ಲ ಸಿದ್ಧತೆ ನಡೆಸಿದ್ದರು.

ಸಾರ್ವಜನಿಕರು ಮತ್ತು ತಾಲ್ಲೂಕಿನ ವಿವಿಧ ಪಕ್ಷಗಳ ಮುಖಂಡರು ಸಿಂಧನೂರು ನಗರದಿಂದ 6 ಕಿ.ಮಿ ಗಿಂತ ಹೆಚ್ಚು ದೂರವಿರುವ ಸ್ಥಳದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವುದು ಸೂಕ್ತವಲ್ಲ. ಮಹಿಳೆಯರಿಗೆ ಅಷ್ಟು ದೂರದವರೆಗೆ ಹೋಗುವುದು ಕಷ್ಟವಾಗಿರುವುದರಿಂದ ಅದನ್ನು ಸಿಂಧನೂರಿಗೆ ಸ್ಥಳಾಂತರಿಸಬೇಕು ಎಂದು ತೀವ್ರ ಒತ್ತಡ ಹಾಕಿದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಆವರಣದಲ್ಲಿರುವ ಜಾಗವನ್ನು ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಿಕೊಂಡು ತಾಯಿ-ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಕಳೆದ ಎರಡು ವರ್ಷದ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಕಟ್ಟಡಕ್ಕೆ ₹12 ಕೋಟಿ ಹಣ ಬಿಡುಗಡೆ ಮಾಡಿ ಕಲಬುರಗಿಯ ಖಾಸಗಿ ಕಂಪನಿಯೊಂದಕ್ಕೆ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿಕೊಡಲಾಗಿತ್ತು. ಆದರೆ ಎರಡು ವರ್ಷ ಪೂರ್ಣಗೊಂಡಿದ್ದರು. ಇನ್ನು ಆಸ್ಪತ್ರೆಯ ಕಟ್ಟಡ ಮಾತ್ರ ಅರೆಬರೆ ಸ್ಥಿತಿಯಲ್ಲಿಯೇ ಉಳಿದಿದೆಂದು ಸಾರ್ವಜನಿಕರು ದೂರಿದ್ದಾರೆ.

ಆಸ್ಪತ್ರೆ ನಿರ್ಮಾಣವಾದರೆ ಮೂರು ಜನ ಹೆರಿಗೆ ರೋಗ ತಜ್ಞರು, ಮೂರು ಜನ ಮಕ್ಕಳ ತಜ್ಞರು, ಮೂರು ಜನ ಅರವಳಿಕೆ ತಜ್ಞರು ಸೇರಿದಂತೆ ದಾದಿಯರು, ಸಿ ಮತ್ತು ಡಿ ಗುಂಪಿನ ನೌಕರರು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇದರಿಂದ ಮಹಿಳೆಯರ ಮತ್ತು ಮಕ್ಕಳ ರೋಗ ನಿವಾರಣೆಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿದೆ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ.

ಸರ್ಕಾರದ ಆದೇಶದ ಪ್ರಕಾರ ಇಷ್ಟರಲ್ಲಿಯೇ ತಾಯಿ-ಮಕ್ಕಳ ಆಸ್ಪತ್ರೆ ಪೂರ್ಣಗೊಳ್ಳಬೇಕಾಗಿತ್ತು. ತಾಂತ್ರಿಕ ತೊಂದರೆಗಳಿಂದ ವಿಳಂಬವಾಗಿದೆ. ಈ ಕುರಿತು ಶಾಸಕ ಹಂಪನಗೌಡರ ಗಮನ ಸೆಳೆಯಲಾಗುವುದು
ಡಾ.ನಾಗರಾಜ ಕಾಟ್ವಾ ಮುಖ್ಯ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ
ಲೋಕಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿ ಇದಿದ್ದರಿಂದ ಕಾಮಗಾರಿ ತಟಸ್ಥಗೊಂಡಿತ್ತು. ಪುನಃ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರದಲ್ಲಿ ಪೂರ್ಣಗೊಳುಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ
ಹಂಪನಗೌಡ ಬಾದರ್ಲಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT