ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಪರವಾನಿಗೆಗೆ ಏಕಗವಾಕ್ಷಿ ಪದ್ಧತಿ ಶೀಘ್ರ: ವಸತಿ ಸಚಿವ ಯು.ಟಿ. ಖಾದರ್‌

Last Updated 20 ಅಕ್ಟೋಬರ್ 2018, 13:36 IST
ಅಕ್ಷರ ಗಾತ್ರ

ರಾಯಚೂರು: ನಗರ ವ್ಯಾಪ್ತಿಯಲ್ಲಿ ವಸತಿಗಳ ನಿರ್ಮಾಣಕ್ಕೆ ಪರವಾನಿಗೆ ನೀಡಲು ಏಕಗವಾಕ್ಷಿ ಮಾದರಿ ಪದ್ಧತಿಯನ್ನು ಶೀಘ್ರದಲ್ಲೆ ಜಾರಿಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದ ಯರಮರಸ್‌ ಅತಿಥಿಗೃಹದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಪೂರ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. 30 ದಿನಗಳಲ್ಲಿ ಪರವಾನಿಗೆ ಕೊಡಲಾಗುವುದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಪರವಾನಿಗೆಯನ್ನು ಅಧಿಕಾರಿಗಳು ನೀಡದಿದ್ದರೆ, ಅರ್ಜಿ ಅಂಗೀಕೃತವಾಗಿದೆ ಎಂದರ್ಥ ಕಲ್ಪಿಸಲಾಗುವುದು. ಮನೆ ನಿರ್ಮಾಣಕ್ಕಾಗಿ ಜನರು ವಿದ್ಯುತ್‌ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧೆಡೆ ಅಲೆದಾಡುವ ತಾಪತ್ರಯ ತಪ್ಪಿಸಲು ಕ್ರಮ ವಹಿಸಲಾಗುವುದು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದ ಪರಿವೀಕ್ಷಣೆಗಾಗಿ ಒಂದೇ ದಿನ ಬರಬೇಕು. ಇದಕ್ಕೂ ಮೊದಲು ಅರ್ಜಿದಾರರ ಮೊಬೈಲ್‌ಗೆ ಸಂದೇಶ ರವಾನಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು. ಮೊದಲ ಹಂತವಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಜಾರಿಗೊಳಿಸಿ, ಆನಂತರ ಇನ್ನುಳಿದ ಜಿಲ್ಲೆಗಳಿಗೆ ಈ ಪದ್ಧತಿ ವಿಸ್ತರಿಸಲಾಗುವುದು ಎಂದು ಹೇಳಿದರು.

30*40 ಅಳತೆಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರು ಸಾಮಾನ್ಯವಾಗಿ ಬಡ ಅಥವಾ ಮಧ್ಯಮ ವರ್ಗಕ್ಕೆ ಸೇರಿದವರಿರುತ್ತಾರೆ. ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿಯನ್ನೆ ಪರವಾನಿಗೆ ಎಂದು ಪರಿಗಣಿಸಲಾಗುವುದು. ಈ ಅವಕಾಶವನ್ನು 60*80 ನಿವೇಶನದಾರರಿಗೂ ವಿಸ್ತರಿಸುವ ಚಿಂತನೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೆಲವು ನಗರಗಳಲ್ಲಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಮತ್ತು ಒಳಚರಂಡಿ ಕಾಮಗಾರಿಗಳು ನನೆಗುದಿಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ತ್ವರಿತ ಕ್ರಮಕ್ಕೆ ಸೂಚಿಸಲಾಗಿದೆ. ಏಳು ತಿಂಗಳ ಕಾಲಾವಕಾಶ ನೀಡಲಾಗಿದೆ. ಎಲ್ಲ ಶಾಸಕರ ಸಭೆ ಕರೆದು ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇನೆ. ಕಾಮಗಾರಿಗಳನ್ನು ಮುಗಿಸಲು ಸಾಧ್ಯವಿಲ್ಲದ ಕಂಪೆನಿಗಳಿಗೆ ಕೋಕ್‌ ನೀಡಲಾಗುವುದು ಎಂದು ಹೇಳಿದರು.

ಪ್ರಸಕ್ತ ವರ್ಷ ನಾಲ್ಕು ಲಕ್ಷ ಮನೆಗಳ ನಿರ್ಮಾಣ ಗುರಿಯಿದೆ. ರಾಯಚೂರು ಜಿಲ್ಲೆಯಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಈಗಾಗಲೇ 750 ಮನೆಗಳ ನಿರ್ಮಾಣ ಕಾರ್ಯ ಶುರುವಾಗಿದೆ ಎಂದು ತಿಳಿಸಿದರು.

ಕೊಡಗಿನಲ್ಲಿ ಮನೆ ನಿರ್ಮಾಣ

ಕೊಡಗಿನಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಬಡವರು ಹಾಗೂ ಶ್ರೀಮಂತರೂ ಇದ್ದಾರೆ. ಎಲ್ಲರಿಗೂ ಹೊಂದಿಕೆಯಾಗುವಂತಹ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ಕೆಲವು ಕಂಪೆನಿಗಳ ಜೊತೆಗೆ ಮಾತುಕತೆ ನಡೆದಿದೆ. ಮನೆ ನಿರ್ಮಾಣವಾಗುವವರೆಗೂ ತಾತ್ಕಾಲಿಕ್‌ ಶೆಡ್‌ ನಿರ್ಮಾಣದ ಬದಲು ಮಾಸಿಕ ₨10 ಸಾವಿರ ಮನೆ ಬಾಡಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಖಾದರ್‌ ಹೇಳಿದರು.

‘ನಾನು ದೊಡ್ಡವನಲ್ಲ’

ವೀರಶೈವ ಲಿಂಗಾಯತ ವಿಚಾರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ ಸಚಿವ ಖಾದರ್‌, ‘ಧರ್ಮದ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ಅದನ್ನು ಪಕ್ಷದ ವರಿಷ್ಠರು ಕುಳಿತು ಬಗೆಹರಿಸುವರು. ಪಕ್ಷಗಳ ತತ್ವದ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿವೆ. ವರಿಷ್ಠರು ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಅಭ್ಯರ್ಥಿಗಳು ಎಲ್ಲಿ ಸ್ಪರ್ಧಿಸಿದ್ದಾರೋ ಅಲ್ಲಿ ಕಾರ್ಯಕರ್ತರು ಗೆಲುವಿಗೆ ಶ್ರಮಿಸುವರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT