ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಿಲ್ಲೆಯಲ್ಲಿ ಶೇ 48 ರಷ್ಟು ಬಿತ್ತನೆ ಪೂರ್ಣ

ನೀರಾವರಿ ಇರುವ ಭಾಗಗಳಲ್ಲಿ ಶೇ 80 ರಷ್ಟು ಬಿತ್ತನೆ ಬಾಕಿ
Last Updated 20 ಜುಲೈ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯು ಇದುವರೆಗೂ ಶೇ 48 ರಷ್ಟು ಪೂರ್ಣವಾಗಿದೆ.

ಮುಖ್ಯವಾಗಿ, ಮಳೆಯಾಶ್ರಿತ ಖುಷ್ಕಿ ಜಮೀನುಗಳಲ್ಲಿ ಶೇ 72 ರಷ್ಟು ಬಿತ್ತನೆಯಾಗಿದ್ದರೆ, ನೀರಾವರಿ ಭಾಗಗಳಲ್ಲಿ ಶೇ 20.48 ರಷ್ಟು ಮಾತ್ರ ಬಿತ್ತನೆ ಆಗಿದೆ. ಇದೀಗ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ) ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ)ಗಳಿಗೆ ನೀರು ಹರಿಸಲಾಗುತ್ತಿದ್ದು, ಶೀಘ್ರದಲ್ಲೇಭತ್ತದ ಸಸಿ ನಾಟಿ ಮಾಡುವ ಕಾರ್ಯವು ವ್ಯಾಪಕವಾಗಿ ಶುರುವಾಗಲಿದೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಶೇ 78 ರಷ್ಟು ಬಿತ್ತನೆ ಕಾರ್ಯ ಪೂರ್ಣವಾಗಿದ್ದರೆ, ಸಿಂಧನೂರು ತಾಲ್ಲೂಕಿನಲ್ಲಿ ಶೇ 17.15 ರಷ್ಟು ಅತಿಕಡಿಮೆ ಬಿತ್ತನೆ ಆಗಿದೆ. ರಾಯಚೂರು ತಾಲ್ಲೂಕಿನಲ್ಲಿ ಶೇ 43 ರಷ್ಟು, ಮಾನ್ವಿ ತಾಲ್ಲೂಕಿನಲ್ಲಿ ಶೇ 44 ರಷ್ಟು, ಸಿರವಾರ ತಾಲ್ಲೂಕಿನಲ್ಲಿ ಶೇ 76 ರಷ್ಟು, ದೇವದುರ್ಗ ತಾಲ್ಲೂಕಿನಲ್ಲಿ ಶೇ 45 ರಷ್ಟು, ಮಸ್ಕಿ ತಾಲ್ಲೂಕಿನಲ್ಲಿ ಶೇ 56 ರಷ್ಟು ಬಿತ್ತನೆಯಾಗಿದೆ.

ಎಣ್ಣೆಕಾಳು ಬೆಳೆಗಳು, ವಾಣಿಜ್ಯ ಬೆಳೆಗಳು, ಏಕದಳ ಧಾನ್ಯಗಳು ಹಾಗೂ ದ್ವಿದಳ ಧಾನ್ಯಗಳ ಬಿತ್ತನೆಯು ಕಾಲುವೆ ನೀರು ಹರಿಸಿದ ನಂತರವೇ ಪೂರ್ಣವಾಗಲಿದೆ. ಶೇಂಗಾ, ಸೂರ್ಯಕಾಂತಿ, ಔಡಲ, ಗುರೆಳ್ಳು, ಅಗಸೆ ಹಾಗೂ ಎಳ್ಳು ಬಿತ್ತನೆ ಶೇ 20ರಷ್ಟು, ಹತ್ತಿ ಶೇ 56 ರಷ್ಟು, ಭತ್ತ, ಜೋಳ, ಸಜ್ಜೆ ಹಾಗೂ ನವಣೆ ಶೇ 22 ರಷ್ಟು ಹಾಗೂ ತೊಗರಿ, ಹೆಸರು, ಉದ್ದು, ಹುರುಳಿ ಹಾಗೂ ಆಲಸಂದಿ ಶೇ 79 ರಷ್ಟು ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ನೀರಾವರಿ ಭೂಮಿಗಿಂತಲೂ ಮಳೆಯಾಶ್ರಿತ ಖುಷ್ಕಿ ಜಮೀನು ಹೆಚ್ಚಿನ ಪ್ರಮಾಣದಲ್ಲಿದೆ. ಒಟ್ಟು 2.49 ಲಕ್ಷ ಹೆಕ್ಟೇರ್‌ ಖುಷ್ಕಿ ಭೂಮಿಯಿದ್ದರೆ, ನೀರಾವರಿ ಜಮೀನು 2.30 ಲಕ್ಷ ಹೆಕ್ಟೇರ್‌ನಷ್ಟಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 4.79 ಲಕ್ಷ ಹೆಕ್ಟೇರ್‌ ಭೂಮಿ ಬಿತ್ತನೆಯಾಗುವ ಗುರಿ ಹೊಂದಲಾಗಿದೆ.

ಮಳೆ ವಿಳಂಬ: ಜೂನ್‌ ಕೊನೆಯವರೆಗೂ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ, ಭತ್ತದ ಸಸಿ ಮಾಡುವುದು ಸೇರಿದಂತೆ ತೊಗರಿ, ಹತ್ತಿ ಬಿತ್ತನೆಗೂ ಆತಂಕ ಎದುರಾಗಿತ್ತು. ಜುಲೈ ಆರಂಭವಾಗುತ್ತಿದ್ದಂತೆ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗುವುದಕ್ಕೆ ಪೂರಕವಾಗಿ ಮಳೆ ಸುರಿದಿದ್ದರಿಂದ ಖುಷ್ಕಿ ಆಶ್ರಿತ ರೈತರು ಬಿತ್ತನೆ ಮಾಡಿದ್ದು, ಈಗಾಗಲೇ ಬೀಜಗಳು ಮೊಳಕೆ ಒಡೆಯುತ್ತಿವೆ. ಆದರೆ, ಕಾಲುವೆ ಭಾಗದ ರೈತರು ಭತ್ತ ನೆಡುವುದಕ್ಕೆ ಬೇಕಾಗುವಷ್ಟು ಮಳೆನೀರು ಸಿಕ್ಕಿಲ್ಲ. ಹೀಗಾಗಿ ಕಾಲುವೆಗೆ ನೀರು ಹರಿಸುವುದನ್ನೆ ರೈತರು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT