ಗುರುವಾರ , ಆಗಸ್ಟ್ 5, 2021
21 °C
ಸಿರವಾರ ಬಿತ್ತನೆಯಲ್ಲಿ ಮುಂದಿದೆ, ಮಸ್ಕಿಯಲ್ಲಿ ಹೆಚ್ಚು ಮಳೆ ಸುರಿದಿದೆ

ಮುಂಗಾರು: ರಾಯಚೂರು ಜಿಲ್ಲೆಯಲ್ಲಿ ಶೇ 42 ರಷ್ಟು ಬಿತ್ತನೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಹಂಗಾಮು ಹಿತಮಿತವಾಗಿದ್ದು, ಇದುವರೆಗೂ ಶೇ 42 ರಷ್ಟು ಬಿತ್ತನೆ ಆಗಿದೆ.

ಅತಿಹೆಚ್ಚು ಶೇ 40 ರಷ್ಟು 1.37 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ. ಎನ್‌ಆರ್‌ಬಿಸಿ ಮತ್ತು ಟಿಎಲ್‌ಬಿಸಿ ಕಾಲುವೆಗಳಿಗೆ ನೀರು ಹರಿಸಿದ ಬಳಿಕ ಭತ್ತ ಬಿತ್ತನೆ ಮಾಡುವುದಕ್ಕೆ ರೈತರು ತಯಾರಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹತ್ತಿ ಬಿತ್ತನೆಯು 84 ಸಾವಿರ ಹೆಕ್ಟೇರ್‌ ಗುರಿಯು ಬಹುತೇತ ಪೂರ್ಣವಾಗುತ್ತಿದ್ದು, ಈಗಾಗಲೇ 62 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಈ ವರ್ಷ ತೊಗರಿ 46 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿರುವುದು ಗಮನಾರ್ಹ. ಇದಲ್ಲದೆ ಸೂರ್ಯಕಾಂತಿ, ಹೆಸರು, ಶೇಂಗಾ ಬೀಜಗಳನ್ನು ಕೆಲವು ರೈತರು ಬಿತ್ತನೆ ಮಾಡಿದ್ದಾರೆ.

ಜಿಲ್ಲೆಯಲ್ಲಿರುವ 3,45,293 ಹೆಕ್ಟೇರ್‌ ಬಿತ್ತನೆ ಪ್ರದೇಶದ ಪೈಕಿ 1,45,937 ಹೆಕ್ಟೇರ್‌ನಲ್ಲಿ ಬಿತ್ತನೆ ಮುಗಿದಿದೆ. ಸಿಂಧನೂರು ತಾಲ್ಲೂಕಿನಲ್ಲಿ ಜುಲೈ ಅಸಮರ್ಪಕ ಸುರಿದ ಮಳೆ ಕಾರಣದಿಂದ ಬಿತ್ತನೆ ಜೋರಾಗಿಲ್ಲ. ಕಾಲುವೆ ಭಾಗವನ್ನು ಹೊರತುಪಡಿಸಿ ಮಳೆಯಾಶ್ರಿತ ಭೂಮಿಯೂ ಅಲ್ಲಿ ಬಹಳಷ್ಟಿದೆ. ಇನ್ನುಳಿದ ತಾಲ್ಲೂಕುಗಳಿಗೆ ಹೋಲಿಸಿದೆ ಅತಿಹೆಚ್ಚು ಬಿತ್ತನೆ ಪ್ರದೇಶ ಇದ್ದರೂ ಶೇ 9ರಷ್ಟು ಮಾತ್ರ ಬಿತ್ತನೆ ಆಗಿದೆ. ರಾಯಚೂರು ತಾಲ್ಲೂಕಿನಲ್ಲಿ ಶೇ 41, ಮಾನ್ವಿ ತಾಲ್ಲೂಕಿನಲ್ಲಿ ಶೇ 47, ಸಿರವಾರ ತಾಲ್ಲೂಕಿನಲ್ಲಿ ಶೇ 72, ದೇವದುರ್ಗ ತಾಲ್ಲೂಕಿನಲ್ಲಿ ಶೇ 44, ಲಿಂಗಸುಗೂರು ತಾಲ್ಲೂಕಿನಲ್ಲಿ ಶೇ 65, ಮಸ್ಕಿ ತಾಲ್ಲೂಕಿನಲ್ಲಿ ಶೇ 53 ರಷ್ಟು ಬಿತ್ತನೆ ಆಗಿದೆ. ಒಟ್ಟು ಜಿಲ್ಲೆಯಲ್ಲಿ ಶೇ 50 ಕ್ಕಿಂತ ಹೆಚ್ಚು ಭೂಮಿಯಲ್ಲಿ ಬಿತ್ತನೆ ಆಗಬೇಕಿದೆ.

ಸಮರ್ಪಕ ಮಳೆ: ಜೂನ್‌ನಲ್ಲಿ 85 ಮಿಲಿಮೀಟರ್‌ ವಾಡಿಕೆ ಮಳೆಗಿಂತಲೂ 135 ಮಿಲಿಮೀಟರ್‌ ಮಳೆ ಸುರಿದಿದೆ. ಜುಲೈ ಮೊದಲ ವಾರ ಸಿಂಧನೂರು ತಾಲ್ಲೂಕಿನಲ್ಲಿ ಶೇ 29 ರಷ್ಟು ಮಳೆ ಕೊರತೆಯಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಬಿದ್ದಿದೆ. ಜೂನ್‌ 1 ರಿಂದ ಜುಲೈ 8 ರವರೆಗೂ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 8 ರಷ್ಟು ಹೆಚ್ಚು ಮಳೆ ಬಿದ್ದಿದೆ.

ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಮಸ್ಕಿ ತಾಲ್ಲೂಕಿನಲ್ಲಿ ಜೂನ್‌, ಜುಲೈ ಅತಿಹೆಚ್ಚು ಕ್ರಮವಾಗಿ ಶೇ 47 ಮತ್ತು ಶೇ 133 ರಷ್ಟು ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು