ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌: ಆರ್‌ಎಸ್‌ ಪ್ರೌಢಶಾಲೆಯ ಸಂದೀಪ, ಸುದೀಪ ಪ್ರಥಮ

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನಲ್ಲಿ ರಾಯಚೂರಿನ ಆದರ್ಶ ವಿದ್ಯಾಲಯ ದ್ವಿತೀಯ, ರೇಸ್‌ ಕಾನ್ಸೆಪ್ಟ್ ಶಾಲೆ ತೃತೀಯ
Last Updated 24 ಜನವರಿ 2020, 12:27 IST
ಅಕ್ಷರ ಗಾತ್ರ

ರಾಯಚೂರು: ನಗರದ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಹಾಗೂ ‘ದೀಕ್ಷಾ’ ಸಂಸ್ಥೆಯ ಸಹಯೋಗದಲ್ಲಿ ಶುಕ್ರವಾರ ನಡೆದ ರಾಯಚೂರು ವಲಯಮಟ್ಟದ ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ನಗರದ ಮದರ್‌ ಎಜ್ಯುಕೇಷನ್‌ ಟ್ರಸ್ಟ್‌ನ ಎಸ್‌ಆರ್‌ಎಸ್‌ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಂದೀಪ ಪಾಟೀಲ ಹಾಗೂ ಸುದೀಪ ಪಾಟೀಲ ಅವರು ಪ್ರಥಮ ಸ್ಥಾನ ಪಡೆದರು. ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಅಂತಿಮ ಸುತ್ತಿಗೆ ಅವರು ಆಯ್ಕೆಯಾದರು.

ರಾಯಚೂರಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಗೌಡಪ್ಪ ಹಾಗೂ ಮನೋಜ ತಂಡ ದ್ವಿತೀಯ ಸ್ಥಾನ ಪಡೆಯಿತು. ರೇಸ್‌ ಕನ್ಸೆಪ್ಟ್‌ ಶಾಲೆಯ ವಿದ್ಯಾರ್ಥಿಗಳಾದ ಅಮೋಘ ಹಾಗೂ ಆರ್ಯನ್‌ ತಂಡವು ತೃತೀಯ ಸ್ಥಾನ ಪಡೆಯಿತು. ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಒಟ್ಟು ಐದು ಸುತ್ತುಗಳಲ್ಲಿ ನಡೆದ ಕ್ವಿಜ್‌ ಚಾಂಪಿಯನ್‌ಷಿಪ್‌ ಕ್ಷಣಕ್ಷಣಕ್ಕೂ ಉತ್ಸಾಹ ಹಾಗೂ ಕಾತರದಿಂದ ಕೂಡಿತ್ತು. ಪ್ರತಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ತೋರಿಸಿದ್ದು ವಿಶೇಷ. ಅತಿ ಉತ್ಸಾಹವು ಕೆಲವು ಸಲ ಎಡವಟ್ಟಿಗೆ ಕಾರಣವಾಗುತ್ತದೆ. ಮೊದಲು ಸುತ್ತಿನಲ್ಲಿ ಸಾಕಷ್ಟು ಅಂತರ ಕಾಯ್ದುಕೊಂಡು ಮುಂಚೂಣಿಯಲ್ಲಿದ್ದ ಎರಡನೇ ಸ್ಥಾನ ಪಡೆದಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು, ಆನಂತರದ ಸುತ್ತುಗಳಲ್ಲಿ ಬಜರ್‌ ಒತ್ತಿ ತಪ್ಪು ಉತ್ತರಗಳನ್ನು ಕೊಟ್ಟು ಅಂಕಗಳನ್ನು ಕಳೆದುಕೊಂಡರು.

ಪ್ರಾರಂಭದಲ್ಲಿಯೆ ಭಾಗವಹಿಸಿದ್ದ ಎಲ್ಲ ತಂಡಗಳಿಗೂ 20 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲು ಅವಕಾಶ ಒದಗಿಸಲಾಗಿತ್ತು. ಈ ಸುತ್ತಿನಲ್ಲಿ ಗರಿಷ್ಠ ಅಂಕಗಳನ್ನು ಪಡೆದಿದ್ದ ಆರು ತಂಡಗಳನ್ನು ಮೌಖಿಕ ಪ್ರಶ್ನಾವಳಿ ಸುತ್ತುಗಳಿಗೆ ಅರ್ಹಗೊಳಿಸಲಾಯಿತು. ಸಿಂಧನೂರಿನ ಆದರ್ಶ ವಿದ್ಯಾಲಯರ ಪ್ರಶಾಂತ ಮತ್ತು ಆಯೂನ್‌, ಜ್ಞಾನಗಂಗಾ ಪ್ರೌಢಶಾಲೆಯ ಸಿದ್ರಾಮ ಮತ್ತು ಮನೋಜ ಹಾಗೂ ಕೃಷ್ಣದೇವರಾಯ ಶಾಲೆಯ ಲಿಂಗನಗೌಡ ಮತ್ತು ಕವನಾ ಅವರು ಮೌಖಿಕ ಪ್ರಶ್ನಾವಳಿ ತಂಡಗಳಲ್ಲಿದ್ದರು.

ಸಾಮಾನ್ಯ ಪ್ರಶ್ನಾವಳಿ ಸುತ್ತು, ಸರಿ–ತಪ್ಪು ಸುತ್ತು, ತರ್ಕಬದ್ಧ ಸುತ್ತು ಹಾಗೂ ಕ್ಷಿಪ್ರವಾಗಿ ಉತ್ತರಿಸುವ ಸುತ್ತುಗಳಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಲಾಯಿತು. ಪ್ರತಿಯೊಬ್ಬರೂ ಅಮಿತೋತ್ಸಾಹದಲ್ಲಿ ಪಾಲ್ಗೊಂಡು ಉತ್ತರಿಸಿದರು. ಮೌಖಿಕ ಸುತ್ತಿನಿಂದ ಹೊರಗುಳಿದ ವಿದ್ಯಾರ್ಥಿಗಳಿಗೂ ಪ್ರಶ್ನೆಗಳನ್ನು ಕೇಳಲಾಯಿತು. ಉತ್ತರಿಸಿದ ಪ್ರತಿ ವಿದ್ಯಾರ್ಥಿಗೂ ಕಿರುಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಥಳೀಯ ಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಸ್ತರದಲ್ಲಿ ಪ್ರಶ್ನೆಗಳಿದ್ದವು.

ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ವಿಜೇತವಾದ ಮೂರು ತಂಡಗಳಿಗೆ ಟ್ರೋಫಿ, ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ವಿತರಿಸಿದರು. ಆನಂತರ ಮಾತನಾಡಿ, ‘ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ವೃದ್ಧಿಸುವ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳವಣಿಗೆ ಆಗುತ್ತದೆ. ಕ್ವಿಜ್‌ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ತಂಡ ಗೆಲುವು ಸಾಧಿಸಿದ್ದರೂ, ಇನ್ನುಳಿದವರು ಪುನರಾವಲೋಕನ ಮಾಡಿಕೊಳ್ಳುವುದಕ್ಕೆ ಇದು ಅವಕಾಶ ಮಾಡಿಕೊಟ್ಟಿದೆ. ರಾಯಚೂರಿನಲ್ಲಿ ಸ್ಥಾನ ಪಡೆದ ತಂಡವು ರಾಜ್ಯಮಟ್ಟದಲ್ಲೂ ಗೆಲುವು ಸಾಧಿಸುವಂತಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ ಅವರು ಪ್ರಶ್ನೆಗಳನ್ನು ಕೇಳಿ, ಸ್ಪರ್ಧಾ ಸುತ್ತುಗಳನ್ನು ನಿರ್ವಹಿಸಿದರು. ವಿಡಿಯೋ, ಆಡಿಯೋ ಆಧರಿಸಿದ ಪ್ರಶ್ನೆಗಳಿಗೆ ಉತ್ತರಿಸಲು ವಿದ್ಯಾರ್ಥಿಗಳು ಹೆಚ್ಚು ಕಾತುರತೆ ತೋರಿದರು.

ಕ್ವಿಜ್‌ ಚಾಂಪಿಯನ್‌ಷಿಪ್‌ನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್‌. ಗೋನಾಳ ಅವರು ಉದ್ಘಾಟಿಸಿದರು. ‘ಶಿಕ್ಷಣ ಇಲಾಖೆಯು ಮಾಡಬೇಕಿರುವ ಕಾರ್ಯವನ್ನು ‘ಪ್ರಜಾವಾಣಿ’ಯಿಂದ ತುಂಬಾ ಶಿಸ್ತುಬದ್ಧವಾಗಿ ಮಾಡುತ್ತಿರುವುದು ಮಾದರಿಯಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗಿದ್ದ ಪ್ರತಿ ವಿದ್ಯಾರ್ಥಿಗೂ ಪ್ರಮಾಣಪತ್ರಗಳನ್ನು ನೀಡಲಾಯಿತು. ಮಧ್ಯಾಹ್ನ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT