ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಬೀಡುಬಿಟ್ಟ ರಾಜ್ಯಮಟ್ಟದ ನಾಯಕರು

ಜಾತಿವಾರು ನಾಯಕರಿಂದ ಮತಯಾಚನೆ ತಂತ್ರ
Last Updated 30 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಯಚೂರು: ಮಸ್ಕಿ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಗೆಲುವಿನ ತಂತ್ರ–ಪ್ರತಿತಂತ್ರಗಳು ಜೋರಾಗಿದ್ದು, ಮತದಾರರ ಮನವೊಲಿಸಲು ರಾಜ್ಯಮಟ್ಟದ ನಾಯಕರು ಕ್ಷೇತ್ರದಲ್ಲಿ ಬೀಡುಬಿಟ್ಟು ಕೆಲಸ ಮಾಡುತ್ತಿದ್ದಾರೆ.

ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಲ್ಲದೆ ಪರಿಶಿಷ್ಟ ಜಾತಿಯ ವಿವಿಧ ಸಮಯದಾಯಗಳು, ಲಿಂಗಾಯತ ಸಮುದಾಯಗಳು ಹಾಗೂ ಮುಸಲ್ಮಾನರು ಕ್ಷೇತ್ರದಲ್ಲಿದ್ದಾರೆ. ಆಯಾ ಜಾತಿಯ ಮುಖಂಡರು ಗ್ರಾಮದಿಂದ ಗ್ರಾಮಕ್ಕೆ ಸುತ್ತಾಟ ಆರಂಭಿಸಿದ್ದು, ಹಲವು ಭರವಸೆ ನೀಡುತ್ತಿರುವುದು ವಿಶೇಷ.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರನ್ನು ಗೆಲ್ಲಿಸುವಂತೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಸಚಿವ ಬಿ.ಶ್ರೀರಾಮುಲು ಅವರು ಮನವಿ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಸಚಿವ ಆಗಿರುವುದರಿಂದ ಇಷ್ಟು ವರ್ಷಗಳವರೆಗೆ ಈಡೇರದಿದ್ದ ಬೇಡಿಕೆ ಈಡೇರಿಸುತ್ತೇನೆ ಎನ್ನುವ ಭರವಸೆ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿ/ ಪಂಗಡದ ಮೀಸಲು ಹೆಚ್ಚಿಸಲಾಗುವುದು. ಅದರಲ್ಲೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 7.5 ಕ್ಕೆ ಏರಿಕೆ ಮಾಡಲು ಬದ್ಧನಾಗಿದ್ದೇನೆ ಎಂದು ಹೇಳುತ್ತಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೂ ತೆರಳಿ, ಅಲ್ಲಿರುವ ಪ್ರಮುಖರಿಗೆ ಪ್ರತ್ಯೇಕ ಸಭೆಗಳನ್ನು ಆಯೋಜಿಸಿ ಸರ್ಕಾರದ ಅಭಿವೃದ್ಧಿಪರ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟು ಬೆಂಬಲ ಕೋರುತ್ತಿದ್ದಾರೆ. ಅದೇ ರೀತಿ ಸುರಪುರ ಶಾಸಕ ರಾಜುಗೌಡ ಅವರು ಪರಿಶಿಷ್ಟ ಪಂಗಡದ ಜನರ ಮನವೊಲಿಸುತ್ತಿದ್ದಾರೆ.

ಶಾಸಕರಾದ ಬಸವರಾಜ ದಢೇಸುಗೂರು, ಡಾ.ಶಿವರಾಜ ಪಾಟೀಲ, ಪರಣ್ಣ ಮನವಳ್ಳಿ, ದೊಡ್ಡನಗೌಡ ಅವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕುರುಬರ ಮತ ಸೆಳೆಯಲು ಕೆ.ವಿರೂಪಾಕ್ಷಪ್ಪ ಅವರು ಪ್ರಚಾರ ಮಾಡುತ್ತಿದ್ದಾರೆ. ಸಂಸದ ಕರಡಿ ಸಂಗಣ್ಣ ಸೇರಿ ಅನೇಕರು ಅಭ್ಯರ್ಥಿ ಗೆಲುವಿಗಾಗಿ ಶ್ರಮ ಹಾಕುತ್ತಿದ್ದಾರೆ.

ಕಾಂಗ್ರೆಸ್‌ ಕೂಡಾ ಜಾತಿವಾರು ನಾಯಕರನ್ನು ಕರೆಸಿ ಮತಗಳನ್ನು ಸೆಳೆಯುತ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ಅವರು ಒಂದು ವಾರದಿಂದ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರಭಾವ ಉಳಿಸಿಕೊಂಡಿರುವ ಬಯ್ಯಾಪುರ ಅಮರೇಗೌಡ, ಹಂಪನಗೌಡ ಬಾದರ್ಲಿ, ಶಿವರಾಜ ತಂಗಡಗಿ ತಮ್ಮತಮ್ಮ ಸಮುದಾಯದ ಜನರ ಬೆಂಬಲ ಪಡೆಯುವುದಕ್ಕೆ ಒತ್ತು ನೀಡುತ್ತಿದ್ದಾರೆ.

ಏ‍ಪ್ರಿಲ್‌ ಮೊದಲ ವಾರ ಮಸ್ಕಿ ಉಪಚುನಾವಣೆ ಕಣದಲ್ಲಿ ನಾಯಕರ ಸಂಚಾರ ಇನ್ನೂ ಹೆಚ್ಚಳವಾಗಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶೆಪ್ಪನವರ, ಅಲ್ಲಂ ವೀರಭದ್ರಪ್ಪ ಹಾಗೂ ಈಶ್ವರ ಖಂಡ್ರೆ ಸೇರಿದಂತೆ ಹಲವರು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಕ್ಷೇತ್ರದಲ್ಲಿ ಸಂಚರಿಸಿ ಮತಯಾಚಿಸುವರು.

ಬಿಜೆಪಿ ಪರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತೊಮ್ಮೆ ಬರುವ ನಿರೀಕ್ಷೆ ಇದೆ. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಏಪ್ರಿಲ್‌ 3 ರ ಬಳಿಕ ಮಸ್ಕಿಯಲ್ಲಿ ವಾಸ್ತವ್ಯ ಉಳಿದು ಗೆಲುವಿನ ಯೋಜನೆ ಮಾಡಲಿದ್ದಾರೆ. ವಸತಿ ಸಚಿವ ಸೋಮಣ್ಣ ಸೇರಿ ಹಲವು ಸಚಿವರ ದಂಡು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT