ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಸ್ವಚ್ಛ ಭಾರತ ಯೋಜನೆ ಅನುಷ್ಠಾನ ವಿಫಲ

ಅಧಿಕಾರಿಗಳ ವಿರುದ್ಧ ಹೊನ್ನಳ್ಳಿ ಗ್ರಾಮಸ್ಥರ ಅಸಮಾಧಾನ
ಅಕ್ಷರ ಗಾತ್ರ

ಲಿಂಗಸುಗೂರು: ‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಲ್ಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗಳು ವಿಫಲವಾಗಿವೆ’ ಎಂಬುದು ಗ್ರಾಮಸ್ಥರ ಆರೋಪ.

ತಾಲ್ಲೂಕು ಕೇಂದ್ರದಿಂದ 7ಕಿ.ಮೀ ಅಂತರದಲ್ಲಿರುವ ಐತಿಹಾಸಿಕ ಹಿನ್ನಲೆ ಹೊಂದಿರುವ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾಗಿದೆ. ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳದೆ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಸಂಬಂಧಿಸಿ 382 ಜನರ ವಿರುದ್ಧ ಕ್ರಿಮಿನಲ್‍ ಮೊಕದ್ದಮೆ ದಾಖಲಾಗಿತ್ತು.

ಮೂರು ದಶಕಗಳ ಅವಧಿಯಲ್ಲಿ ವಸತಿ ಯೋಜನೆ, ಉದ್ಯೋಗ ಖಾತ್ರಿ ಹಣ ದುರ್ಬಳಕೆ, ಬಡಾವಣೆಗಳಲ್ಲಿನ ಮೀಸಲು ಜಾಗೆ ಮಾರಾಟ ಸೇರಿದಂತೆ ಗ್ರಾಮಸ್ಥರು ದೂರು ಸಲ್ಲಿಸುತ್ತ ಬಂದಿದ್ದರೂ ನಿರ್ವಹಣೆ ಮತ್ತು ಮೇಲುಸ್ತುವಾರಿ ಅಧಿಕಾರಿಗಳು ಕಿಂಚಿತ್ತು ಸ್ಪಂದನೆ ನೀಡದಿರುವುದು ಗ್ರಾಮದ ಅಭಿವೃದ್ಧಿಗೆ ಮಾರಕವಾಗಿದೆ.

ಹೊನ್ನಳ್ಳಿ 670 ಮನೆಗಳಿದ್ದು ಅಂದಾಜು 2650 ಜನಸಂಖ್ಯೆ ಹೊಂದಿದೆ. ಗ್ರಾಮದ ಬಹುತೇಕ ರಸ್ತೆಗಳು ಒತ್ತುವರಿ ಆಗಿದ್ದು ವಾಹನ ಸಂಚಾರ ಅಸಾಧ್ಯವಾಗಿದೆ. ಉಳಿದ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದಷ್ಟು ಕಲುಷಿತ ನೀರು ಹರಿಯುವ ಜೊತೆಗೆ ಬಹುತೇಕ ಕಡೆಗಳಲ್ಲಿ ಸಂಗ್ರಹಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ ಎಂದು ಯಮನವ್ವ ಹಿಡಿಶಾಪ ಹಾಕುತ್ತಾರೆ.

‘ಏಳುವರೆ ದಶಕಗಳ ಅಧಿಯಲ್ಲಿ ಉದ್ಯೋಗ ಖಾತ್ರಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ರಸ್ತೆ, ಚರಂಡಿ, ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಹೆಸರಲ್ಲಿ ಕೋಟ್ಯಾಂತರ ಹಣ ದುರಪಯೋಗವಾಗಿದೆ. ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ದುರುಗೇಶ, ಬಸವರಾಜ, ವಿಜಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗ್ರಾಮದ ಕೆಲ ರಸ್ತೆಗಳಲ್ಲಿ ಬಚ್ಚಲು, ಮಳೆ, ಬಟ್ಟೆ ತೊಳೆದ ನೀರು ಹರಿದು ಹೋಗುತ್ತಿಲ್ಲ. ಗ್ರಾಮಸ್ಥರು ತಮ್ಮ ಗಮನಕ್ಕೆ ತಂದಿದ್ದಾರೆ. ತೆಗ್ಗು ಪ್ರದೇಶ ಇರುವುದರಿಂದ ಅಲ್ಲಿನ ಮನೆ ಮಾಲೀಕರಿಗೆ ಇಂಗುಗುಂಡಿ ನಿರ್ಮಿಸಿಕೊಳ್ಳಲು ಸೂಚಿಸಿದೆ. ಅರ್ಜಿ ಸಲ್ಲಿಸಿದರೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರುಸಿದ್ದಪ್ಪ ಹೇಳಿದರು.

**

ಸರ್ಕಾರದಿಂದ ಗ್ರಾಮದ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಿಡುಗಡೆ ಆಗುತ್ತಿದೆ. ಆಡಳಿತ ಮಂಡಳಿ ಸ್ವಾರ್ಥತೆ, ದುರ್ಬಳಕೆಗೆ ಅಧಿಕಾರಿ ವರ್ಗದ ಪ್ರೋತ್ಸಾಹ ಗ್ರಾಮದ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿದೆ

- ಮೌನೇಶ ನಾಯಕ, ಸಾಮಾಜಿಕ ಕಾರ್ಯಕರ್ತ, ಹೊನ್ನಳ್ಳಿ

***

ಹಲವು ವರ್ಷಗಳಿಂದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಗಮನಕ್ಕೆ ತರುತ್ತ ಬಂದಿದ್ದೇವೆ. ರಸ್ತೆಯಲ್ಲಿ ಕಲುಷಿತ ನೀರು ಸಂಗ್ರಹಗೊಂಡು ನಾಯಿ, ಹಂದಿಗಳ ತಾಣವಾಗಿದೆ. ದುರ್ನಾತದಿಂದ ಬೇಸತ್ತು ಹೋಗಿದ್ದೇವೆ.

- ದೇವಪ್ಪ ಹೊಸಮನಿ, ಜನತಾ ಕಾಲೊನಿ ನಿವಾಸಿ, ಹೊನ್ನಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT